ತಿಹಾರ್ ಜೈಲಿನಲ್ಲಿರುವ ಬಿಆರ್ಎಸ್ ನಾಯಕಿ ಕವಿತಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ ಸಿಬಿಐ
ಕೆ ಕವಿತಾ | PC ; NDTV
ಹೊಸದಿಲ್ಲಿ: ದಿಲ್ಲಿ ಅಬಕಾರಿ ಹಗರಣಕ್ಕೆ ನಂಟು ಹೊಂದಿದೆಯೆನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ಎಸ್ ನಾಯಕಿ ಕೆ ಕವಿತಾ ಅವರನ್ನು ತಿಹಾರ ಜೈಲಿನೊಳಗಡೆಯಿಂದಲೇ ಸಿಬಿಐ ಇಂದು ಬಂಧಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಕವಿತಾ ಅವರನ್ನು ಜೈಲಿನಲ್ಲಿಯೇ ಸಿಬಿಐ ಪ್ರಶ್ನಿಸಿದ ನಂತರ ಆಕೆಯನ್ನು ಇಂದು ಬಂಧಿಸಲಾಗಿದೆ.
ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಸಿಬಿಐ ಅಧಿಕಾರಿಗಳು ಆಕೆಯನ್ನು ಕಳೆದ ಶನಿವಾರ ಜೈಲಿನೊಳಗಿನಿಂದಲೇ ಪ್ರಶ್ನಿಸಿದ್ದರು. ಸಹ ಆರೋಪಿ ಬುಚ್ಚಿ ಬಾಬು ಅವರ ಫೋನ್ನಿಂದ ಹಿಂಪಡೆಯಲಾದ ವಾಟ್ಸ್ಯಾಪ್ ಚಾಟ್ಗಳು ಹಾಗೂ ಭೂ ಒಪ್ಪಂದದ ಕುರಿತ ದಾಖಲೆಗಳ ಬಗ್ಗೆ ಹಾಗೂ ಅಬಕಾರಿ ನೀತಿಯನ್ನು ಮದ್ಯ ಲಾಬಿಗೆ ಅನುಕೂಲಕರವಾಗುವಂತೆ ಮಾಡಲು ಆಪ್ಗೆ ಲಂಚದ ರೂಪದಲ್ಲಿ ನೀಡಲಾದ ರೂ 100 ಕೋಟಿ ಕುರಿತಂತೆಯೂ ಪ್ರಶ್ನಿಸಲಾಗಿತ್ತು.
ಈ ರೀತಿ ತನ್ನನ್ನು ಪ್ರಶ್ನಿಸಿರುವುದು ತನ್ನನ್ನು ಹಾಗೂ ತನ್ನ ಖಾಸಗಿತನವನ್ನು ಬಾಧಿಸಿದೆ. ನನ್ನ ಮೊಬೈಲ್ ಫೋನ್ ಅನ್ನು ಎಲ್ಲಾ ಟಿವಿ ವಾಹಿನಿಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಆಕೆ ಆರೋಪಿಸಿದ್ದರು.
ನಾನು ತನಿಖೆಗೆ ಸಹಕರಿಸುತ್ತಿದ್ದೇನೆ. ನಾನು ನಾಶಪಡಿಸಿದ್ದೇನೆ ಎಂದು ಇಡಿ ಹೇಳುವ ಎಲ್ಲಾ ಮೊಬೈಲ್ ಫೋನ್ಗಳನ್ನೂ ಹಸ್ತಾಂತರಿಸುತ್ತೇನೆ,” ಎಂದು ಆಕೆ ಹೇಳಿದ್ದರು.