ಆ್ಯಮ್ನೆಸ್ಟಿ ಇಂಡಿಯಾ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದ ಸಿಬಿಐ
ವಿದೇಶಿ ನಿಧಿಗಳ ನಿಯಮಗಳನ್ನು ಉಲ್ಲಂಘಿಸಿದ ಆರೋಪ
Photo: ANI
ಹೊಸದಿಲ್ಲಿ: ವಿದೇಶಿ ನಿಧಿಗಳ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಕೇಂದ್ರೀಯ ತನಿಖಾ ದಳ (ಸಿಬಿಐ)ವು ಗುರುವಾರ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ, ಅದರ ಮಾಜಿ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ಮತ್ತು ಇತರ ಆರು ಮಂದಿಯ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದೆ.
ಪಟೇಲ್, ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಐಐಪಿಎಲ್), ಇಂಡಿಯನ್ಸ್ ಫಾರ್ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಟ್ರಸ್ಟ್, ಎಐಐಪಿಎಲ್ನ ಮಾಜಿ ನಿರ್ದೇಶಕರಾದ ಶೋಭಾ ಮತಾಯಿ, ನಂದಿನಿ ಆನಂದ್ ಬಸಪ್ಪ ಮತ್ತು ಮಿನಾರ್ ವಾಸುದೇವ ಪಿಂಪಲ್, ಎಐಐಪಿಎಲ್ ನ ಕಾರ್ಯಾಚರಣೆ ಮುಖ್ಯಸ್ಥ ಮೋಹನ್ ಪ್ರೇಮಾನಂದ ಮುಂಡ್ಕೂರು ಮತ್ತು ಅದರ ಸಂಚಾಲಕ ರಾಜ್ ಕಿಶೋರ್ ಕಪಿಲ್ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ 120ಬಿ (ಕ್ರಿಮಿನಲ್ ಪಿತೂರಿ) ಮತ್ತು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ, 2010ರ ವಿಧಿಗಳನ್ವಯ ಆರೋಪಿಗಳ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ.
ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಗೆ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್- ಯುನೈಟೆಡ್ ಕಿಂಗ್ಡಮ್ನಿಂದ ವಿದೇಶಿ ದೇಣಿಗೆಗಳನ್ನು ಪಡೆಯಲು 2011-12ರಲ್ಲಿ ಅನುಮತಿ ನೀಡಲಾಗಿತ್ತು ಎಂದು ಸಿಬಿಐ ಹೇಳಿದೆ. ಆದರೆ, ಭದ್ರತಾ ಸಂಸ್ಥೆಗಳು ಸಲ್ಲಿಸಿರುವ ಪ್ರತಿಕೂಲ ವರದಿಗಳ ಹಿನ್ನೆಲೆಯಲ್ಲಿ ಅದಕ್ಕೆ ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಅದು ತಿಳಿಸಿದೆ.
‘‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಿಂದ ಪಾರಾಗಲು 2012-13 ಮತ್ತು 2013-14ರಲ್ಲಿ ಇಂಡಿಯನ್ಸ್ ಫಾರ್ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಟ್ರಸ್ಟ್ ಮತ್ತು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಎಂದು ಸಿಬಿಐ ಆರೋಪಿಸಿದೆ.
ಭಾರತೀಯ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಹೇಳಿದೆ. ‘‘ಸರಕಾರದ ಗಂಭೀರ ನಿಷ್ಕ್ರಿಯತೆಗಳು ಮತ್ತು ಅತಿರೇಕಗಳನ್ನು ಆ್ಯಮ್ನೆಸ್ಟಿ ಇಂಡಿಯಾ ಪ್ರಶ್ನಿಸಿತ್ತು. ಅದಕ್ಕಾಗಿ ನಮ್ಮ ಕಾನೂನುಬದ್ಧ ನಿಧಿ ಸಂಗ್ರಹ ಮಾದರಿಯನ್ನು ಅಕ್ರಮ ಹಣ ವರ್ಗಾವಣೆಯೆಂಬಂತೆ ಬಿಂಬಿಸಲಾಗುತ್ತಿದೆ’’ ಎಂದು ಅದು ಆರೋಪಿಸಿದೆ.