ʼನಗದಿಗಾಗಿ ಪ್ರಶ್ನೆʼ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ
ಮಹುವಾ ಮೊಯಿತ್ರಾ | Photo: PTI
ಹೊಸ ದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಪಾಲರ ನಿರ್ದೇಶನದ ಮೇರೆಗೆ ಮಹುವಾ ಮೊಯಿತ್ರಾ ಭಾಗಿಯಾಗಿರುವ ನಗದಿಗಾಗಿ ಪ್ರಶ್ನೆ ವಿವಾದದ ಕುರಿತು ಕೇಂದ್ರ ತನಿಖಾ ದಳ(ಸಿಬಿಐ)ವು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ಪ್ರಾಥಮಿಕ ತನಿಖೆಯಡಿ ಕೇಂದ್ರ ತನಿಖಾ ತಂಡವು ಆರೋಪಿಯನ್ನು ಬಂಧಿಸಲಾಗಲಿ ಅಥವಾ ಅವರ ನಿವಾಸವನ್ನು ಶೋಧಿಸಲಾಗಲಿ ಅವಕಾಶವಿಲ್ಲವಾದರೂ, ಮಾಹಿತಿ ಸಂಗ್ರಹ, ದಾಖಲೆಗಳ ಪರೀಕ್ಷೆ ನಡೆಸಲು ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆಯಾದ ಮಹುವಾ ಮೊಯಿತ್ರಾರನ್ನು ಪ್ರಶ್ನಿಸಲು ಅವಕಾಶವಿದೆ. ಈ ತನಿಖೆಯು ಲೋಕಪಾಲರ ಆದೇಶವನ್ನು ಆಧರಿಸಿರುವುದರಿಂದ, ತನಿಖಾ ವರದಿಯನ್ನು ಲೋಕಪಾಲರಿಗೆ ಸಲ್ಲಿಸಲಾಗುತ್ತದೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಮಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆಂದು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹಾದ್ರೈ ಸಲ್ಲಿಸಿದ್ದ ದೂರನ್ನು ಆಧರಿಸಿ ಸಿಬಿಐ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ದೆಹಾದ್ರೈ ಪತ್ರ ಬರೆದಿದ್ದರು ಹಾಗೂ ದುಬೆಯ ದೂರನ್ನು ಆಧರಿಸಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಆ ದೂರನ್ನು ನೈತಿಕ ಸಮಿತಿಗೆ ಶಿಫಾರಸು ಮಾಡಿದ್ದರು. ಸಂಸದ ದುಬೆ ಲೋಕಪಾಲರಿಗೂ ದೂರು ನೀಡಿದ್ದರು.