ಸಿಬಿಐ ಸ್ವತಂತ್ರ ಸಂಸ್ಥೆ, ಅದರ ಮೇಲೆ ತನಗೆ ಯಾವುದೇ ನಿಯಂತ್ರಣವಿಲ್ಲ: ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ತನ್ನದೇ ಆದ ಪ್ರತ್ಯೇಕ ಕಾನೂನಾತ್ಮಕ ಗುರುತು ಇರುವುದರಿಂದ ತನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ಗುರುವಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು Live Law ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ. ಬಿ.ಆರ್.ಗವಾಯಿ ಮತ್ತು ನ್ಯಾ. ಅರವಿಂದ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರದ ಸಮ್ಮತಿಯಿಲ್ಲದೆ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ ಎಂದು ಟಿಎಂಸಿ ಸರ್ಕಾರವು ಆರೋಪಿಸಿತು.
ಗುರುವಾರದ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ತನಿಖಾ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿದ್ದು, ವಿರೋಧ ಪಕ್ಷಗಳು ಈ ಸಂಸ್ಥೆಯು ರಾಜಕೀಯ ಪಕ್ಷಪಾತಿಯಾಗಿದೆ ಎಂದು ಆರೋಪಿಸುತ್ತಿವೆ ಎಂದು ಹೇಳಿದರು.
ಆದರೆ, “ಸಿಬಿಐ ಕೇಂದ್ರ ಸರ್ಕಾರದ ಅಂಗವಲ್ಲ. ಅದು ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯ್ದೆಯಡಿಯ ಶಾಸನಾತ್ಮಕ ಸಂಸ್ಥೆಯಾಗಿದೆ” ಎಂದು ಅವರು ಪ್ರತಿಪಾದಿಸಿದರು.
ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ನನ್ನ ಕಕ್ಷಿದಾರರ ಅರ್ಜಿಯು ತನಿಖಾ ಸಂಸ್ಥೆಯ ಸ್ವಾಯತ್ತತೆ ಕುರಿತಾದದ್ದಲ್ಲ. ಆದರೆ, ರಾಜ್ಯಗಳು ಸಾಮಾನ್ಯ ಸಮ್ಮತಿಯನ್ನು ಹಿಂಪಡೆದ ನಂತರವೂ ಪ್ರಕರಣಗಳ ತನಿಖೆ ನಡೆಸುವ ಅದರ ವ್ಯಾಪ್ತಿಯ ಕುರಿತಾದದ್ದು ಎಂದು ವಾದಿಸಿದರು.
ಸಂವಿಧಾನದಡಿ ‘ಪೊಲೀಸ್’ ವ್ಯವಸ್ಥೆಯು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಕೇಂದ್ರ ಸರ್ಕಾರದ ಅಧೀನದಡಿ ಬರುವುದಿಲ್ಲ. ಇದರ ಪರಿಣಾಮವಾಗಿ ಕೇಂದ್ರ ತನಿಖಾ ಸಂಸ್ಥೆಯನ್ನು ನಿಯಂತ್ರಿಸುವ ಕಾನೂನಿನ ಪ್ರಕಾರ, ರಾಜ್ಯ ಸರ್ಕಾರಗಳ ಸಮ್ಮತಿಯಿಲ್ಲದೆ ತನಿಖಾ ಸಂಸ್ಥೆಯು ಕಾರ್ಯಾಚರಿಸುವಂತಿಲ್ಲ ಎಂದು ನಿರ್ದಿಷ್ಟವಾಗಿ ನಮೂದಿಸಲಾಗಿದೆ.
ಹೀಗಿದ್ದೂ, ರಾಜ್ಯಗಳ ಸಮ್ಮತಿಯಿಲ್ಲದೆ ದೇಶದ ಯಾವುದೇ ಮೂಲೆಯಲ್ಲಿನ ಅಪರಾಧ ಪ್ರಕರಣಗಳನ್ನು ತನಿಖೆಗೊಳಪಡಿಸುವಂತೆ ಕೇಂದ್ರ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ನಿರ್ದೇಶನ ನೀಡಬಹುದಾಗಿದೆ.
12 ಪ್ರಕರಣಗಳಲ್ಲಿ ನಡೆಯುತ್ತಿರುವ ಕೇಂದ್ರ ತನಿಖಾ ಸಂಸ್ಥೆಯ ತನಿಖೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರವು ಸಲ್ಲಿಸಿರುವ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ.