ಸಿಬಿಐ ನನ್ನ ನಿಯಂತ್ರಣದಲ್ಲಿಲ್ಲ | ಸುಪ್ರೀಂಕೋರ್ಟ್ ನಲ್ಲಿ ಕೇಂದ್ರದ ವಿವರಣೆ
CBI | PC : ANI
ಕೋಲ್ಕತಾ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನ್ನ ನಿಯಂತ್ರಣದಲ್ಲಿಲ್ಲವೆಂದು ಕೇಂದ್ರ ಸರಕಾರವು ಗುರುವಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ರಾಜ್ಯ ಸರಕಾರದ ಪೂರ್ವಾನುಮತಿಯಿಲ್ಲದೆ ಸಿಬಿಐ ಹಲವಾರು ಪ್ರಕರಣಗಳ ತನಿಖೆಯನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರಕಾರವು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಕೇಂದ್ರ ಸರಕಾರ ಈ ವಿವರಣೆ ನೀಡಿದೆ.
ಪಶ್ಚಿಮಬಂಗಾಳದಲ್ಲಿ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುವುದಕ್ಕೆ ಸಾರ್ವತ್ರಿಕ ಸಮ್ಮತಿಯನ್ನು ರಾಜ್ಯವು ಹಿಂತೆಗೆದುಕೊಂಡಿದ್ದರೂ, ಸಿಬಿಐ ಎಫ್ ಐ ಆರ್ ಗಳನ್ನು ದಾಖಲಿಸುವುದನ್ನು ಹಾಗೂ ತನಿಖೆಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದೆಯೆಂದು ತೃಣಮೂಲ ಸರಕಾರವು ಅರ್ಜಿಯಲ್ಲಿ ಆಪಾದಿಸಿತ್ತು.
ರಾಜ್ಯ ಸರಕಾರದ ಅನುಮತಿ ಪಡೆಯದೆಯೇ ಹಲವು ಪ್ರಕರಣಗಳ ತನಿಖೆ ನಡೆಸುತ್ತಿದೆಯೆಂಬ ಪಶ್ಚಿಮ ಬಂಗಾಳ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವುದಕ್ಕೆ ಕೇಂದ್ರ ಸರಕಾರವು ಪ್ರಾಥಮಿಕ ಹಂತಲ್ಲಿದ ಆಕ್ಷೇಪಗಳನ್ನು ವ್ಯಕ್ತಪಡಿಸಿತು.
ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಸಿಬಿಐ ತನ್ನ ಪೂರ್ವಾನುಮತಿ ಪಡೆಯದೆಯೇ ರಾಜ್ಯದ ಹಲವು ಪ್ರಕರಣಗಳ ತನಿಖೆಯನು ನಡೆಸುತ್ತಿದೆಯೆಂದು ಆಪಾದಿಸಿದ ಪಶ್ಚಿಮಬಂಗಾಳ ಸರಕಾರವು ಸಂವಿಧಾನದ 131ನೇ ಕಲಮಿನಡಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರದ ವಿರುದ್ಧ ದಾವೆಯನ್ನು ಹೂಡಿತ್ತು.
ಆದರೆ ರಾಜ್ಯ ಸರಕಾರದ ಆರೋಪವನ್ನು ಅಲ್ಲಗಳೆದ ಕೇಂದ್ರ ಸರಕಾರವು ಸಿಬಿಐ ಸ್ವತಂತ್ರ ಸಂಸ್ಥೆಯಾಗಿದ್ದು ಅದು ಕೇಂದ್ರ ಸರಕಾರದ ನಿಯಂತ್ರಣದಲ್ಲಿಲ್ಲವೆಂದು ಇಂದು ನಡೆದ ಆಲಿಕೆಯ ವೇಳೆ ಸುಪ್ರೀಂಕೋರ್ಟ್ ಗೆ ತಿಳಿಸಿತು. ಪಶ್ಚಿಮಬಂಗಾಳ ಸರಕಾರದ ವಿರುದ್ಧ ಭಾರತ ಸರಕಾರವು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಆದರೆ ಸಿಬಿಐ ದಾಖಲಿಸಿದೆ ಎಂದು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಬಿ.ಆರ್.ಗಾವಳಿ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.
ಕೇಂದ್ರ ಸರಕಾರ ಹಾಗೂ ಒಂದು ಅಥವಾ ಹೆಚ್ಚಿನ ವ್ಯಾಜ್ಯಗಳನ್ನು ನಿರ್ವಹಿಸಲು ಸುಪ್ರೀಂಕೋರ್ಟ್ ಗೆ ಇರುವ ಅಧಿಕಾರ ವ್ಯಾಪ್ತಿಯನ್ನು ಸಂವಿಧಾನದ 131ನೇ ವಿಧಿ ನಿರ್ವಹಿಸುತ್ತದೆ. ಸಂವಿಧಾನದ ಈ ಕಲಮು ಅತ್ಯಂತ ಪವಿತ್ರವಾಗಿದ್ದು, ಅದನ್ನು ಎಂದಿಗೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಮೆಹ್ತಾ, ದ್ವಿಸದಸ್ಯ ನ್ಯಾಯಪೀಠಕ್ಕೆ ತಿಳಿಸಿದರು.
ರಾಜ್ಯದಲ್ಲಿ ತನಿಖೆ ಅಥವಾ ದಾಳಿಗಳನ್ನು ನಡೆಸಲು ಸಿಬಿಐಗೆ ನೀಡಲಾಗಿದ್ದ ಸಾರ್ವತ್ರಿಕ ಸಮ್ಮತಿಯನ್ನು ಪಶ್ಚಿಮಬಂಗಾಳ ಸರಕಾರವು 2018ರ ನವೆಂಬರ್ 16ರಂದು ಹಿಂತೆಗೆದು ಕೊಂಡಿತ್ತು.
ಕೇಂದ್ರದ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷಗಳ ವಿರುದ್ಧ ಸಿಬಿಐ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳನ್ನು ಆಗಾಗ್ಗೆ ದುರುಪಯೋಗಪಡಿಸಿಕೊಳ್ಳುತ್ತಿದೆಯೆಂಬ ಆರೋಪಗಳನ್ನು ಆಗಾಗ್ಗೆ ಎದುರಿಸುತ್ತಲೇ ಇದೆ. ಆದರೆ ಬಿಜೆಪಿಯು ಅದನ್ನು ಬಲವಾಗಿ ಅಲ್ಲಗಳೆಯುತ್ತಲೇ ಬಂದಿದೆ.
ಸಿಬಿಐ ರಾಜಕೀಯ ಪ್ರಭಾವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೆಂಬ ಆರೋಪಗಳನ್ನು ಸಿಬಿಐ ಎದುರಿಸುತ್ತಿದೆ.