ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ| ಆರ್ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಿರುವ ಸಿಬಿಐ
ಸಂದೀಪ್ ಘೋಷ್ (PTI)
ಕೋಲ್ಕತ್ತಾ: ವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಪಾಲಿಗ್ರಾಫ್ ಪರೀಕ್ಷೆ(ಸುಳ್ಳು ಪತ್ತೆ ಪರೀಕ್ಷೆ)ಯನ್ನು ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆಗಸ್ಟ್ 9 ರಂದು ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ವೈದ್ಯೆಯ ಶವ ಪತ್ತೆಯಾದ ಎರಡು ದಿನಗಳ ನಂತರ ರಾಜೀನಾಮೆ ನೀಡಿದ ಘೋಷ್, ಈಗಾಗಲೇ ಹಲವಾರು ಬಾರಿ ವಿಚಾರಣೆಗಾಗಿ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿದ್ದಾರೆ.
"ನಾವು ಘೋಷ್ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವುದಕ್ಕೆ ಬಯಸುತ್ತೇವೆ. ನಮ್ಮ ಕೆಲವು ಪ್ರಶ್ನೆಗಳಿಗೆ ಅವರು ಸಮರ್ಪಕವಾಗಿ ಉತ್ತರ ನೀಡಿಲ್ಲ. ಆದ್ದರಿಂದ, ನಾವು ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸುವ ಆಯ್ಕೆಯ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಘೋಷ್ ಅವರು ಮಂಗಳವಾರವೂ ವೈದ್ಯೆಯ ಅತ್ಯಾಚಾರ-ಕೊಲೆಯ ತನಿಖೆಯ ಭಾಗವಾಗಿ ತನಿಖಾಧಿಕಾರಿಗಳಿಂದ ವಿಚಾರಣೆಗೆ ಹಾಜರಾಗಿದ್ದರು.
ಆರ್ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಆಕೆಯ ಶವ ಪತ್ತೆಯಾದ ನಂತರ ಅದರ ಪಕ್ಕದ ಕೊಠಡಿಗಳ ನವೀಕರಣದ ಮಾಡಿರುವ ಬಗ್ಗೆಯೂ ಅವರನ್ನು ಪ್ರಶ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತನಾಗಿರುವ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐ ಈ ಹಿಂದೆ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು.
ಕಲ್ಕತ್ತಾ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಸಿಬಿಐ ಕಳೆದ ವಾರ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ.