ಗುಜರಾತ್ | ಚುನಾವಣೆ ಸಹ ಪ್ರಭಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ಆಪ್ ನಾಯಕನ ನಿವಾಸದ ಮೇಲೆ ಸಿಬಿಐ ದಾಳಿ

ಸಂದೀಪ್ ಪಾಠಕ್ (Photo: ANI)
ಹೊಸದಿಲ್ಲಿ : ಆಪ್ ನಾಯಕ ದುರ್ಗೇಶ್ ಪಾಠಕ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್, ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ದಾಳಿಯು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
2027ರ ಗುಜರಾತ್ ಚುನಾವಣೆಗೆ ಸಹ ಪ್ರಭಾರಿಯಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಆಪ್ ನಾಯಕ ದುರ್ಗೇಶ್ ಪಾಠಕ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಗುಜರಾತ್ನಲ್ಲಿ ಆಪ್ ಪ್ರಭಾವ ಹೆಚ್ಚುತ್ತಿರುವುದರಿಂದ ಇದು ದೊಡ್ಡ ಬೆದರಿಕೆ ಎಂದು ಬಿಜೆಪಿ ಪರಿಗಣಿಸುತ್ತದೆ ಎಂದು ಸಂದೀಪ್ ಪಾಠಕ್ ಹೇಳಿದ್ದಾರೆ.
ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ(ಎಫ್ಸಿಆರ್ಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ದುರ್ಗೇಶ್ ಪಾಠಕ್ ಅವರ ನಿವಾಸದ ಮೇಲೆ ಸಿಬಿಐ ಗುರುವಾರ ದಾಳಿ ನಡೆಸಿದೆ.
ʼ2022ರ ಚುನಾವಣೆಯಲ್ಲಿ ಆಪ್ ಪಕ್ಷವು ಗುಜರಾತ್ನಲ್ಲಿ ಐದು ಸ್ಥಾನಗಳಲ್ಲಿ ಗೆದ್ದುಕೊಂಡಿದೆ. ಆಪ್ ಪಕ್ಷದ ಬೆಳವಣಿಗೆಯಿಂದ ಭಯಗೊಂಡು ಈ ದಾಳಿ ನಡೆಸಲಾಗಿದೆʼ ಎಂದು ಆಪ್ ನಾಯಕರು ಆರೋಪಿಸಿದ್ದಾರೆ.