ಈಡಿ ಮೇಲೆ ಸಿಬಿಐ ದಾಳಿ ಪ್ರಕರಣ | ಈಡಿ ಅಧಿಕಾರಿಯ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲು

Photo credit: X/@ANI/@dir_ed
ಹೊಸದಿಲ್ಲಿ: ಶಿಮ್ಲಾದಲ್ಲಿ ನಿಯೋಜನೆಗೊಂಡಿರುವ ಜಾರಿ ನಿರ್ದೇಶನಾಲಯ(ಈಡಿ)ಯ ಸಹಾಯಕ ನಿರ್ದೇಶಕ ಭಾಗಿಯಾಗಿದ್ದಾರೆ ಎನ್ನಲಾದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತೊಂದು ಎಫ್ಐಆರ್ ದಾಖಲಿಸಿದೆ.
ಕಳೆದ ವಾರ ಸಿಬಿಐ ನಡೆಸಿದ ಕಾರ್ಯಾಚರಣೆಯ ವೇಳೆ ಈಡಿ ಅಧಿಕಾರಿ ತಪ್ಪಿಸಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಶಿಕ್ಷಣ ಸಂಸ್ಥೆಗಳ ಪ್ರವರ್ತಕರಿಂದ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಮತ್ತು ಇನ್ನೊಂದು ಪ್ರಕರಣದಲ್ಲಿ 85 ಲಕ್ಷ ರೂಪಾಯಿ ಲಂಚದ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡು ಎಫ್ಐಆರ್ ಗಳನ್ನು ದಾಖಲಿಸಿದೆ ಎಂದು ತಿಳಿದುಬಂದಿದೆ.
ಪ್ರಕರಣದ ದೂರುದಾರರೂ ಆಗಿರುವ ಹಿಮಾಚಲ ಪ್ರದೇಶದ ಶಿಕ್ಷಣ ಸಂಸ್ಥೆಗಳ ಪ್ರವರ್ತಕರು, ಶಿಮ್ಲಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈಡಿ ಸಹಾಯಕ ನಿರ್ದೇಶಕರು ತಮ್ಮನ್ನು ಕಚೇರಿಗೆ ಕರೆದು ಹಿಂಸಿಸುತ್ತಿದ್ದರು ಮತ್ತು ಲಂಚಕ್ಕೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಈಡಿ ಅಧಿಕಾರಿ ಮತ್ತು ಅವರ ಇಬ್ಬರು ಸಿಬ್ಬಂದಿಗಳು ನಮ್ಮನ್ನು ಶಿಮ್ಲಾದ ಈಡಿ ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವಂತೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಪ್ರಕರಣದಲ್ಲಿ ಮೂವರು ಭಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಸಿಬಿಐಯು ಆರೋಪಿ ಅಧಿಕಾರಿಯ ಸಹೋದರ ಮತ್ತು ಮಧ್ಯವರ್ತಿಯನ್ನು ಈಗಾಗಲೇ ಬಂಧಿಸಿದ್ದಾರೆ. ಆದರೆ ಅಧಿಕಾರಿ ಪರಾರಿಯಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ.
ಹಿಮಾಚಲ ಪ್ರದೇಶದಲ್ಲಿ ಮೆಟ್ರಿಕ್ಯುಲೇಷನ್ ನಂತರದ ವಿದ್ಯಾರ್ಥಿವೇತನ ಹಗರಣವನ್ನು ತನಿಖೆಯನ್ನು ಶಿಮ್ಲಾದಲ್ಲಿ ನಿಯೋಜನೆಗೊಂಡ ಜಾರಿ ನಿರ್ದೇಶನಾಲಯ(ಈಡಿ)ದ ಸಹಾಯಕ ನಿರ್ದೇಶಕ ಮಾಡುತ್ತಿದ್ದರು. ಅವರು ದಿಲ್ಲಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ತನ್ನ ಸಹೋದರ ಜೊತೆ ಚಂಡೀಗಢದ ಬಳಿಯಿರುವ ಸ್ಥಳಕ್ಕೆ ಪ್ರವರ್ತಕರಿಂದ ಲಂಚ ಪಡೆಯಲು ತೆರಳಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ಎದುರಿಸುತ್ತಿರುವ ಶಿಕ್ಷಣ ಸಂಸ್ಥೆ ಪ್ರವರ್ತಕರನ್ನು ಲಂಚದ ಹಣದೊಂದಿಗೆ ನಿಗದಿತ ಸ್ಥಳಕ್ಕೆ ಬರು ಹೇಳಿದ್ದರು ಎಂದು ಆರೋಪಿಸಲಾಗಿದೆ.
ಶಿಕ್ಷಣ ಸಂಸ್ಥೆಯ ಪ್ರವತ್ರಕರು ಈ ಬಗ್ಗೆ ಸಿಬಿಐ ಗೆ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಸಿಬಿಐ ಚಂಡೀಗಢ ಘಟಕವು ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಕಾರ್ಯಾಚರಣೆಯನ್ನು ಯೋಜಿಸಿತ್ತು. ಅದರಂತೆ ದೂರುದಾರ ಪ್ರವರ್ತಕರಿಗೆ 55 ಲಕ್ಷ ರೂಪಾಯಿ ನಗದು ಲಂಚವನ್ನು ಈಡಿ ಅಧಿಕಾರಿಗೆ ನೀಡುವಂತೆ ಸೂಚಿಸಲಾಯಿತು. ಸಿಬಿಐ ಅಧಿಕಾರಿಗಳು ಕಾರ್ಯಚರಣೆಯ ಮೇಲೆ ಕಣ್ಣಿಟ್ಟು ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದರು.
ಲಂಚ ಪಡೆಯುತ್ತಿದ್ದಂತೆ ಈಡಿ ಅಧಿಕಾರಿಯನ್ನು ಸಿಬಿಐ ಬಂಧಿಸುವ ಯೋಜನೆಯಿತ್ತು ಎನ್ನಲಾಗಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ (ಸಿಬಿಐಸಿ) ನಿಯೋಜನೆಯ ಮೇಲೆ ಈಡಿಯಲ್ಲಿರುವ ಈಡಿ ಅಧಿಕಾರಿಗೆ ಕಾರ್ಯಾಚರಣೆ ಸುಳಿವು ದೊರೆತು, ಅವರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಏಳು ದಿನಗಳಿಂದ ಈಡಿ ಅಧಿಕಾರಿಯ ಪತ್ತೆಗೆ ಸಿಬಿಐ ಪ್ರಯತ್ನಿಸುತ್ತಿದೆ.
ಇಲ್ಲಿಯವರೆಗೆ, ಲಂಚದ ಹಣ ಸೇರಿದಂತೆ ಸುಮಾರು 1 ಕೋಟಿ ರೂಪಾಯಿ ಮೊತ್ತದ ಹಣವನ್ನು ಕಾರ್ಯಾಚರಣೆಯ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.