21 ಶಾಲೆಗಳ ಮಾನ್ಯತೆಯನ್ನು ಹಿಂಪಡೆದ CBSE
ಆರು ಶಾಲೆಗಳ ದರ್ಜೆ ಕಡಿತಗೊಳಿಸಿ, ನೋಟಿಸ್ ಜಾರಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಒಂಬತ್ತನೆ ತರಗತಿಯಿಂದ ಹನ್ನೆರಡನೆ ತರಗತಿವರೆಗೆ ಗಮನಾರ್ಹ ಸಂಖ್ಯೆಯ ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ ಎಂಬ ಕಾರಣವನ್ನು ಮುಂದು ಮಾಡಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 21 ಶಾಲೆಗಳ ಮಾನ್ಯತೆಯನ್ನು ಹಿಂಪಡೆದಿದೆ ಎಂದು ವರದಿಯಾಗಿದೆ.
ಇದರೊಂದಿಗೆ, ಹಿರಿಯ ಪ್ರೌಢಶಾಲಾ ಹಂತದಿಂದ ಪ್ರೌಢಶಾಲಾ ಹಂತದವರೆಗಿನ ಆರು ಶಾಲೆಗಳ ದರ್ಜೆಯನ್ನೂ ಕಡಿತಗೊಳಿಸಿದೆ.
ಈ ಮಾಹಿತಿಯನ್ನು ನವೆಂಬರ್ 6, 2024ರಂದು ಹೊರಡಿಸಲಾಗಿರುವ ನೋಟಿಸ್ ಮೂಲಕ ನೀಡಲಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಪ್ರಕಾರ, ಸೆಪ್ಟೆಂಬರ್ 3, 2024ರಂದು ರಾಜಸ್ಥಾನ ಮತ್ತು ದಿಲ್ಲಿಯಲ್ಲಿನ 27 ಶಾಲೆಗಳ ಮೇಲೆ ಅಚ್ಚರಿಯ ಸರಣಿ ದಾಳಿಗಳನ್ನು ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಮಂಡಳಿಯ ಮಾನ್ಯತೆ ಹಾಗೂ ಪರೀಕ್ಷಾ ಬೈಲಾಗಳ ಪ್ರಕಾರ, ಶಾಲೆಗಳಿಗೆ ವಿದ್ಯಾರ್ಥಿಗಳು ನಿಯಮಿತವಾಗಿ ಹಾಜರಾಗುತ್ತಿದ್ದಾರೆಯೆ ಹಾಗೂ ಶಾಲೆಗಳು ನಿಯಮಾನುಸಾರ ಶಾಲೆಗಳು ಕಾರ್ಯನಿರ್ವಹಿಸುತ್ತಿವೆಯೆ ಎಂಬುದನ್ನು ಪತ್ತೆ ಹಚ್ಚಲು ಈ ಪರಿಶೀಲನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತನ್ನ ಪ್ರಕಟಣೆಯಲ್ಲಿ CBSE ತಿಳಿಸಿದೆ.
ನಿಷ್ಕ್ರಿಯ ಹಾಗೂ ಗೈರು ಹಾಜರಿ ಶಾಲೆಗಳು ಶೈಕ್ಷಣಿಕ ಸಮಗ್ರತೆಗೆ ಕುಂದುಂಟು ಮಾಡುತ್ತವೆ ಎಂದು ಅಭಿಪ್ರಾಯ ಪಟ್ಟಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, ಅಂತಹ ಶಾಲೆಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, 30 ದಿನಗಳೊಳಗಾಗಿ ಪ್ರತಿಕ್ರಿಯಿಸುವಂತೆ ಸೂಚನೆ ನೀಡಿದೆ.