ಉರ್ದು ಕೈಬಿಟ್ಟ ಸಿಬಿಎಸ್ಇ: ಸಂಕಷ್ಟಕ್ಕೆ ಸಿಲುಕಿದ ವಿದ್ಯಾಥಿಗಳು
PC: x.com/MuslimMirror
ಹೊಸದಿಲ್ಲಿ: ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿ (ಸಿಬಿಎಸ್ಇ) ಇನ್ನು ಮುಂದೆ ಪ್ರಶ್ನೆ ಪತ್ರಿಕೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವಿತರಿಸಲು ನಿರ್ಧರಿಸಿದ್ದು, ಇದರಿಂದ ಸಾವಿರಾರು ಮಂದಿ ಉರ್ದು ಮಾಧ್ಯಮ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾನಿಲಯ ಸೇರಿದಂತೆ ಉರ್ದು ಮಾಧ್ಯಮದಲ್ಲಿ ಪಾಠ- ಪ್ರವಚನ ನಡೆಯುವ, ದೇಶಾದ್ಯಂತ ಇರುವ ಹಲವು ಉರ್ದು ಮಾಧ್ಯಮ ಶಾಲೆಗಳ ಮೇಲೆ ಪರಿಣಾಮ ಬೀರಲಿದೆ.
ಇದೀಗ ಈ ವಿದ್ಯಾರ್ಥಿಗಳು,ತಮ್ಮ ಪ್ರವೇಶದ ಅರ್ಜಿಗಳನ್ನು ಭರ್ತಿ ಮಾಡುವ ವೇಳೆ ಇಂಗ್ಲಿಷ್ ಅಥವಾ ಹಿಂದಿ ಮಾಧ್ಯಮವನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಉರ್ದುವಿನಲ್ಲಿ ನೈಪುಣ್ಯ ಹೊಂದಿದ ಪಾಲಿಗೆ ಇದು ಮಾರಕವಾಗಲಿದೆ.
ದ ಟೆಲಿಗ್ರಾಫ್ ವರದಿಯ ಪ್ರಕಾರ, ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ 10 ಮತ್ತು 12ನೇ ತರಗತಿ ಪ್ರಶ್ನೆಪತ್ರಿಕೆಗಳನ್ನು ಒದಗಿಸಲು ಸಿಬಿಎಸ್ಇ ನಿರ್ಧರಿಸಿದೆ. ಮಂಡಳಿಯ ಅನುಮತಿ ಪಡೆಯದೇ ಇತರ ಯಾವುದೇ ಭಾಷೆಗಳಲ್ಲಿ ಬರೆದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಮಂಡಳಿ ಅನುಮತಿ ನೀಡದ ಭಾಷೆಗಳಲ್ಲಿ ಬರೆದರೆ ಅಂಥ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದಿಲ್ಲ ಹಾಗೂ ಆ ವಿಷಯಗಳಿಗೆ ಅಂಕ ನೀಡಲಾಗುವುದಿಲ್ಲ ಎಂದೂ ಹೇಳಲಾಗಿದೆ.
ಮೌಲಾನಾ ಆಝಾದ್ ವಿವಿಗೆ ಮಾನ್ಯತೆ ನೀಡುವಾಗಲೇ, ಇಲ್ಲಿ ಉರ್ದು ಮಾಧ್ಯಮದಲ್ಲಿ ಪಾಠ- ಪ್ರವಚನ ನೀಡಲಾಗುತ್ತದೆ ಎಂಬ ಪರಿಕಲ್ಪನೆ ಸಿಬಿಎಸ್ಇಗೆ ಇತ್ತು. 2010ರಲ್ಲಿ ಸ್ಥಾಪಿಸಲ್ಪಟ್ಟ ಈ ವಿವಿ ವ್ಯಾಪ್ತಿಯ ಶಾಲೆಗಳಿಗೆ ಈ ಮೊದಲು ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತಿತ್ತು. 2020ರ ಬಳಿಕ ಉರ್ದು ಪ್ರಶ್ನೆಪತ್ರಿಕೆಗಳನ್ನು ರದ್ದುಪಡಿಸಿದರೂ, ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ಉರ್ದುವಿನಲ್ಲಿ ಉತ್ತರ ಬರೆಯುತ್ತಿದ್ದರು. ಆದರೆ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಇದಕ್ಕೂ ಅವಕಾಶ ಇರುವುದಿಲ್ಲ.