ನಾಗ್ಪುರ ಅಪಘಾತ ಪ್ರಕರಣ: ಆರೋಪಿ ಬಿಜೆಪಿ ನಾಯಕನ ಪುತ್ರ ಬಾರ್ ಗೆ ಭೇಟಿ ನೀಡಿದ್ದ ಸಿಸಿಟಿವಿ ದೃಶ್ಯಾವಳಿ ನಾಪತ್ತೆ!
Photo: NDTV
ನಾಗ್ಪುರ: AUDI ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಅವರ ಪುತ್ರ ಸಂಕೇತ್ ಮತ್ತು ಅವರ ಸ್ನೇಹಿತರು ಬಾರ್ಗೆ ಭೇಟಿ ನೀಡಿದ್ದ ಸಿಸಿಟಿವಿ ದೃಶ್ಯಾವಳಿಗಳು ನಾಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಮೊದಲು ಅವರು 'ಲಾ ಹೋರಿ ಬಾರ್'ನಲ್ಲಿ ಇದ್ದ ಸಿಸಿಟಿವಿ ದೃಶ್ಯಾವಳಿಗಳು ಕಾಣೆಯಾಗಿವೆ. ನಾವು ಬುಧವಾರ ಅವರ ಡಿವಿಆರ್ ಅನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅದನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿದ್ದೇವೆ ಎಂದು ಸೀತಾಬುಲ್ಡಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
'ಲಾ ಹೋರಿ ಬಾರ್' ಮ್ಯಾನೇಜರ್ ಮಂಗಳವಾರ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು ಎಂದು ಅವರು ಹೇಳಿದ್ದಾರೆ.
ಸೋಮವಾರ ಮುಂಜಾನೆ ರಾಮದಾಸ್ಪೇಟ್ನಲ್ಲಿ ಸಂಕೇತ್ ಬಾವಂಕುಲೆ ಮತ್ತು ಆತನ ಸ್ನೇಹಿತರು ತೆರಳುತ್ತಿದ್ದ ಆಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಕಾರನ್ನು ಸಂಕೇತ್ ಸ್ನೇಹಿತ ಅರ್ಜುನ್ ಹಾವ್ರೆ ಚಾಲನೆ ಮಾಡುತ್ತಿದ್ದ ಎನ್ನಲಾಗಿತ್ತು.
ಮಂಕಾಪುರದ ಟಿ ಪಾಯಿಂಟ್ನಲ್ಲಿ ಢಿಕ್ಕಿ ಹೊಡೆದ ಕಾರನ್ನು ಹಿಂಬಾಲಿಸಿದ ಪ್ರಯಾಣಿಕರು, ಅರ್ಜುನ್ ಹಾವ್ರೆ ಮತ್ತು ರೋನಿತ್ ಚಿತ್ತವಾಮ್ವಾರ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋಮವಾರ ರಾತ್ರಿ ಹವ್ರೆಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.