ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಬಳಿಕವಷ್ಟೇ ಜನಗಣತಿ: ಸರಕಾರಿ ಆದೇಶ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಭಾರತದಲ್ಲಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯು ಮುಂದಿನ ವರ್ಷದ ಲೋಕಸಭಾ ಚುನಾವಣೆ ಮುಗಿಯುವವರೆಗೆ ನಡೆಯುವುದಿಲ್ಲ ಎಂದು ಸರಕಾರದ ಆದೇಶವೊಂದು ತಿಳಿಸಿದೆ. ಈ ಬಾರಿಯ ಜನಗಣತಿಯು 2021ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು.
ಕಳೆದ ವಾರ, ಭಾರತೀಯ ರಿಜಿಸ್ಟ್ರಾರ್ ಜನರಲ್ ಆದೇಶವನ್ನು ಹೊರಡಿಸಿ, ಆಡಳಿತಾತ್ಮಕ ಗಡಿ ವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಅಂತಿಮ ಗಡುವನ್ನು 2024 ಜನವರಿ 1ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಗಳು, ತಾಲೂಕುಗಳು ಮತ್ತು ಪೊಲೀಸ್ ಠಾಣೆಗಳ ಗಡಿಗಳನ್ನು ಸ್ಥಗಿತಗೊಳಿಸಿದ ಮೂರು ತಿಂಗಳ ಬಳಕವಷ್ಟೇ ಜನಗಣತಿ ನಡೆಸಬಹುದಾಗಿದೆ.
ಲೋಕಸಭಾ ಚುನಾವಣೆಯು 2024ರ ಎಪ್ರಿಲ್ ನಲ್ಲಿ ನಡೆಯುವ ನಿರೀಕ್ಷೆಯಿದೆ. ಹಾಗಾಗಿ, ಜನಗಣತಿ ಯಾವಾಗ ನಡೆಯುತ್ತದೆ ಎನ್ನುವ ಬಗ್ಗೆ ತಕ್ಷಣಕ್ಕೆ ಸ್ಪಷ್ಟತೆಯಿಲ್ಲ. ಶಿಕ್ಷಕರು ಸೇರಿದಂತೆ ಸುಮಾರು 30 ಲಕ್ಷ ಸರಕಾರಿ ನೌಕರರನ್ನು ಜನಗಣತಿಗೆ ನಿಯೋಜಿಸಲಾಗುವುದು. ‘‘ಇದೇ ನೌಕರರನ್ನು ಚುನಾವಣಾ ಕರ್ತವ್ಯಕ್ಕೂ ನಿಯೋಜಿಸಲಾಗುವುದು. ಆ ವೇಳೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಜನಗಣತಿಯು ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರವಷ್ಟೇ ನಡೆಯುವುದು’’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದು ಆಡಳಿತಾತ್ಮಕ ಗಡಿಗಳನ್ನು ಮುಚ್ಚಲು ನೀಡಲಾದ ಗಡುವಿನ ಮೂರನೇ ವಿಸ್ತರಣೆಯಾಗಿದೆ. ಇದಕ್ಕೂ ಮೊದಲು 2023 ಜೂನ್ 30 ಕೊನೆಯ ಗಡುವು ಆಗಿತ್ತು. ಅದಕ್ಕೂ ಮೊದಲು, 2022 ಡಿಸೆಂಬರ್ 31 ಕೊನೆಯ ಗಡುವಾಗಿತ್ತು.
ಹಿಂದಿನ ಜನಗಣತಿಯನ್ನು 2011ರಲ್ಲಿ ನಡೆಸಲಾಗಿತ್ತು. 2020ರಲ್ಲಿ ಜನಗಣತಿಯ ಮೊದಲ ಹಂತವನ್ನು ಆರಂಭಿಸಲು ಭಾರತ ಸಿದ್ಧತೆ ನಡೆಸಿತ್ತು. ಮೊದಲ ಹಂತದಲ್ಲಿ ಮನೆಗಳ ವಿವರಗಳನ್ನು ಕಲೆಹಾಕಲಾಗುತ್ತದೆ. ಆದರೆ, ಕೊರೋನ ವೈರಸ್ ಸಾಂಕ್ರಾಮಿಕವು ಅದಕ್ಕೆ ತಡೆಯಾಯಿತು.