ಕೇಂದ್ರ‘ಸಂಸತ್ತಿನ ಕೊಲೆ’ ಮಾಡುತ್ತಿದೆ , ಪ್ರಜಾಪ್ರಭುತ್ವಕ್ಕೆ ಅಡ್ಡಿಯುಂಟು ಮಾಡುತ್ತಿದೆ: ಟಿಎಂಸಿ ಆರೋಪ
ಸಾಗರಿಕಾ ಘೋಸ್ ( (@sagarikaghose) / X) , ಸಾಕೇತ ಗೋಖಲೆ(PTI)
ಹೊಸದಿಲ್ಲಿ : ಸರಕಾರವು ಸಂಸತ್ತಿನ ‘ಕೊಲೆ’ ಮಾಡುತ್ತಿದೆ ಮತ್ತು ಜನಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ವಿಷಯಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುವುದರಿಂದ ದೂರ ಓಡುತ್ತಿದೆ ಎಂದು ಟಿಎಂಸಿ ಮಂಗಳವಾರ ಆರೋಪಿಸಿದೆ.
ಬಿಜೆಪಿ ಮತ್ತು ಕೇಂದ್ರ ಸರಕಾರ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಕಾರ್ಯಕಾರಿ ಅಧಿಕಾರದ ಅಧೀನಕ್ಕೊಳಪಡಿಸುತ್ತಿವೆ ಎಂದು ರಾಜ್ಯಸಭೆಯಲ್ಲಿ ಟಿಎಂಸಿಯ ಉಪನಾಯಕಿ ಸಾಗರಿಕಾ ಘೋಸ್ ಆರೋಪಿಸಿದರೆ ಸಂಸದ ಸಾಕೇತ ಗೋಖಲೆಯವರು, ಉಭಯ ಸದನಗಳಲ್ಲಿ ಪದೇ ಪದೇ ಕಲಾಪ ವ್ಯತ್ಯಯಗಳಿಗೆ ಆಡಳಿತ ಪಕ್ಷವನ್ನು ದೂಷಿಸಿದರು.
ಈ ಸರಕಾರವು ಸಂಸತ್ತನ್ನು ಕೊಲೆ ಮಾಡುತ್ತಿದೆ. ಜನಸಾಮಾನ್ಯರನ್ನು ಕಾಡುವ ವಿಷಯಗಳಿಗೆ ಅದರ ಬಳಿ ಉತ್ತರಗಳಿಲ್ಲವಾದ್ದರಿಂದ ಅದು ಭಯ ಪಟ್ಟುಕೊಂಡಿದೆ. ಬಿಜೆಪಿ ಮತ್ತು ಸರಕಾರ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಘೋಷ ಹೇಳಿದರು.
ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಂತಹ ವಿಷಯಗಳ ಮೇಲೆ ಚರ್ಚೆಗಳಿಂದ ನುಣುಚಿಕೊಳ್ಳಲು ಸರಕಾರವು ಉದ್ದೇಶಪೂರ್ವಕವಾಗಿ ಸದನ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಗೋಖಲೆ ಆರೋಪಿಸಿದರು.