ಸುಟ್ಟ ಭೂಮಿಯ ಉಪಗ್ರಹ ಚಿತ್ರಗಳೊಂದಿಗೆ ಕೃಷಿ ತ್ಯಾಜ್ಯ ದಹನಕ್ಕೆ ಕಡಿವಾಣ ಹಾಕಲು ಕೇಂದ್ರದ ಯೋಜನೆ
PC : PTI
ಹೊಸದಿಲ್ಲಿ : ರೈತರು ತಮ್ಮ ಪ್ರದೇಶದ ಮೇಲೆ ಉಪಗ್ರಹ ಹಾದು ಹೋಗದ ಸಮಯಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಬೆಂಕಿಯ ಜ್ವಾಲೆಗಳ ಬದಲು ಸುಟ್ಟು ಕರಕಲಾದ ಪ್ರದೇಶಗಳನ್ನು ಅಳತೆ ಮಾಡುವ ಮೂಲಕ ಕೃಷಿ ತ್ಯಾಜ್ಯಗಳ ದಹನದಿಂದ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಯೋಜಿಸುತ್ತಿದೆ.
ಕೃಷಿ ತ್ಯಾಜ್ಯಗಳ ಸುಡುವಿಕೆಯ ಮೇಲೆ ನಿಗಾಯಿರಿಸಲು ಭಾರತವು ಪ್ರಸ್ತುತ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ಮೇಲಿನಿಂದ ದಿನಕ್ಕೆ ಎರಡು ಬಾರಿ ಹಾದು ಹೋಗುವ ನಾಸಾ ಉಪಗ್ರಹಗಳಿಂದ ದತ್ತಾಂಶಗಳನ್ನು ಬಳಸುತ್ತಿದೆ. ಪ್ರತಿ ಚಳಿಗಾಲದಲ್ಲಿ ರಾಜ್ಯ ರಾಜಧಾನಿ ಪ್ರದೇಶಗಳನ್ನು ಆವರಿಸಿಕೊಳ್ಳುವ ಹೊಗೆ ಮಂಜಿನಲ್ಲಿ ಈ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳ ಸುಡುವಿಕೆಯ ಪಾಲು ದೊಡ್ಡದಾಗಿದೆ.
ವಾಯು ಗುಣಮಟ್ಟ ನಿರ್ವಹಣಾ ಪ್ರಾಧಿಕಾರವು ಕೃಷಿ ಬೆಂಕಿಗಳನ್ನು ಲೆಕ್ಕಹಾಕಲು ಸುಟ್ಟು ಕರಕಲಾದ ಪ್ರದೇಶಗಳ ಅಧ್ಯಯನಕ್ಕಾಗಿ ವ್ಯವಸ್ಥೆಯೊಂದನ್ನು ಅಭಿವೃದ್ಧಿಗೊಳಿಸುವಂತೆ ಜನವರಿಯಲ್ಲಿ ಇಸ್ರೋಗೆ ಸೂಚಿಸಲಾಗಿತ್ತು ಎಂದು ಶುಕ್ರವಾರ ತಿಳಿಸಿದೆ.
ಈ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು,ಸದ್ಯಕ್ಕೆ ಅದನ್ನು ಪರೀಕ್ಷಿಸಲಾಗುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು. ಈಗಿನ ವ್ಯವಸ್ಥೆಯು ಸೀಮಿತ ಅವಧಿಗೆ ಕೃಷಿ ಬೆಂಕಿಗಳನ್ನು ಲೆಕ್ಕಹಾಕುತ್ತದೆ ಎಂಬ ವಕೀಲರೋರ್ವರ ಹೇಳಿಕೆಗೆ ಭಾಟಿ ಪ್ರತಿಕ್ರಿಯಿಸುತ್ತಿದ್ದರು.
ರೈತರು ಕ್ರಮೇಣ ಕಣ್ಗಾವಲು ಅವಧಿಯ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ನಾಸಾ ಉಪಗ್ರಹಗಳಿಂದ ತಪ್ಪಿಸಿಕೊಳ್ಳಲು ತಮ್ಮ ಕೃಷಿ ತ್ಯಾಜ್ಯಗಳನ್ನು ಸುಡುವ ಸಮಯವನ್ನು ಬದಲಿಸಿದ್ದಾರೆ ಎಂದು ಶಂಕಿಸಿರುವ ಕೆಲವು ತಜ್ಞರು,ಇದೇ ಕಾರಣದಿಂದ ಈ ವರ್ಷ ಕೃಷಿ ಬೆಂಕಿಯ ಎಣಿಕೆಗಳು ಕಡಿಮೆಯಾಗಿದ್ದರೂ ಮಾಲಿನ್ಯ ಮಟ್ಟ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.
ಸ್ಥಾಯಿ ಉಪಗ್ರಹಗಳಿಂದ ದತ್ತಾಂಶಗಳು ಸಾಕಷ್ಟು ಸೂಕ್ತವಲ್ಲ ಮತ್ತು ಕ್ರಿಯಾತ್ಮಕವಲ್ಲ ಎಂದು ಶುಕ್ರವಾರ ಹೇಳಿರುವ ಸರಕಾರವು, ಅವುಗಳ ಬಳಕೆಗೆ ನ್ಯಾಯಾಲಯದ ಈ ಹಿಂದಿನ ನಿರ್ದೇಶನವನ್ನು ತಳ್ಳಿಹಾಕಿದೆ.
ದಿಲ್ಲಿ ಈ ತಿಂಗಳು ಅಪಾಯಕಾರಿ ಗಾಳಿಯನ್ನು ಉಸಿರಾಡಿಸುತ್ತಿದೆ. ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ 494ರ ಉತ್ತುಂಗ ಮಟ್ಟವನ್ನು ತಲುಪಿದ್ದು, ಸರಕಾರವು ವಾಯುಮಾಲಿನ್ಯ ಸಮಸ್ಯೆಯನ್ನು ಎದುರಿಸಲು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.