ದಿಲ್ಲಿಯಲ್ಲಿ ಸೇವೆಗಳ ನಿಯಂತ್ರಣ ಕುರಿತ ಕೇಂದ್ರದ ಮಸೂದೆ ಲೋಕಸಭೆಯಲ್ಲಿ ಮಂಡನೆ
ಹೊಸದಿಲ್ಲಿ:ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಧಿಕಾರಶಾಹಿಗಳ ಮೇಲೆ ತನ್ನ ಹಿಡಿತ ಸಾಧಿಸಲು ಬಯಸುತ್ತಿರುವ ವಿವಾದಾತ್ಮಕ ಮಸೂದೆಯನ್ನು ಕೇಂದ್ರ ಸರಕಾರವು ಇಂದು ಲೋಕಸಭೆಯಲ್ಲಿ ಮಂಡಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ಮಸೂದೆಯು ದಿಲ್ಲಿಯ ಅಧಿಕಾರಿಗಳ ಪೋಸ್ಟಿಂಗ್ ಮತ್ತು ವರ್ಗಾವಣೆಯ ನಿಯಮಗಳನ್ನು ರೂಪಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ರಾಷ್ಟ್ರ ರಾಜಧಾನಿಯ ಅಧಿಕಾರಿಗಳ ಅಮಾನತು ಮತ್ತು ವಿಚಾರಣೆಗಳಂತಹ ಕ್ರಮಗಳು ಕೂಡ ಕೇಂದ್ರದ ನಿಯಂತ್ರಣದಲ್ಲಿರುತ್ತದೆ ಎಂದು ಮಸೂದೆ ಪ್ರಸ್ತಾಪಿಸುತ್ತದೆ.
ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರದ (ತಿದ್ದುಪಡಿ) ಮಸೂದೆ, 2023, ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇಂದ್ರವು ತಂದ ಸುಗ್ರೀವಾಜ್ಞೆಯನ್ನು ಬದಲಿಸುವ ಗುರಿಯನ್ನು ಹೊಂದಿದೆ.
ಮಣಿಪುರದ ಪರಿಸ್ಥಿತಿಯ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ಇಂದು ಮಧ್ಯಾಹ್ನ ಮಸೂದೆಯನ್ನು ಮಂಡಿಸಲಾಯಿತು.
ಜುಲೈ 20 ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಲಾಪದ ಹೆಚ್ಚಿನ ಅವಧಿ ವ್ಯರ್ಥವಾಗಿದೆ.