ಕೇಂದ್ರ ಬಜೆಟ್ | ದೇಶದ ಟಾಪ್ 500 ಕಂಪೆನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್ಶಿಪ್ ಯೋಜನೆಗೆ ಕಾಂಗ್ರೆಸ್ ಹೇಳಿದ್ದೇನು?
ನಿರ್ಮಲಾ ಸೀತಾರಾಮನ್ | PTI
ಹೊಸದಿಲ್ಲಿ: ಕೇಂದ್ರ ಸರಕಾರವು ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ 12 ತಿಂಗಳ ಕಾಲ ದೇಶದ ಟಾಪ್ 500 ಕಂಪೆನಿಗಳಲ್ಲಿ ರೂ. 5000 ಮಾಸಿಕ ಸಹಾಯಧನ ಸಹಿತ ಇಂಟರ್ನ್ಶಿಪ್ ಒದಗಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ. ಇದರೊಂದಿಗೆ ಒಂದು ಬಾರಿಯ ರೂ. 6,000 ನೆರವನ್ನೂ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಯುವಕರ ತರಬೇತಿಗೆ ತಗಲುವ ವೆಚ್ಚವನ್ನು ಉದ್ಯಮಗಳೇ ಭರಿಸುವ ನಿರೀಕ್ಷೆ ಇದ್ದು, ಇಂಟರ್ನ್ಶಿಪ್ ವೆಚ್ಚದ ಪೈಕಿ ಶೇ. 10ರಷ್ಟು ವೆಚ್ಚವನ್ನು ಸಿಎಸ್ಆರ್ ನಿಧಿಯಿಂದ ಸಂಬಂಧಿತ ಕಂಪೆನಿಗಳು ಭರಿಸಲಿವೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ತನ್ನ 2024 ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ, ತಾನು ಅಧಿಕಾರಕ್ಕೆ ಬಂದರೆ 25 ವರ್ಷ ವಯಸ್ಸಿನ ಕೆಳಗಿನ ಪ್ರತಿಯೊಬ್ಬ ಡಿಪ್ಲೊಮಾ ಅಥವಾ ಕಾಲೇಜು ಪದವೀಧರರಿಗೆ ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಯಲ್ಲಿ ಒಂದು ವರ್ಷದ ಅಪ್ರೆಂಟಿಸ್ಶಿಪ್ ಒದಗಿಸಲು ಹೊಸ 'ರೈಟ್ ಟು ಅಪ್ರೆಂಟಿಸ್ಶಿಪ್' ಕಾಯ್ದೆಯನ್ನು ತರುವುದಾಗಿ ಭರವಸೆ ನೀಡಿತ್ತು.
'ಪೆಹ್ಲಿ ನೌಕ್ರಿ ಪಕ್ಕಿ ' ಘೋಷಣೆಯಡಿಯಲ್ಲಿ ಅಪ್ರೆಂಟಿಸ್ಗಳಿಗೆ ವರ್ಷಕ್ಕೆ 1 ಲಕ್ಷ ರೂ. ಸಿಗಲಿದೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಯೋಜನೆಯು ಕೌಶಲ್ಯ ಅಭಿವೃದ್ಧಿ ಗೊಳಿಸಲಿದ್ದು ಲಕ್ಷಾಂತರ ಯುವಕರಿಗೆ ಪೂರ್ಣ ಸಮಯದ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ನ್ಯಾಯಪತ್ರದಲ್ಲಿ ಹೇಳಲಾಗಿತ್ತು.
ಇದೀಗ ಬಜೆಟ್ ಮಂಡನೆಯಾದ ನಂತರ ಕಾಂಗ್ರೆಸ್ ತನ್ನ ಈ ಭರವಸೆಯ ಕುರಿತು ನೆನಪಿಸಿದೆ. ಕಾಂಗ್ರೆಸ್ನ ನ್ಯಾಯ ಪತ್ರದಿಂದ ವಿತ್ತ ಸಚಿವೆ ಪಾಠವನ್ನು ಕಲಿತುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಬಜೆಟಿನಲ್ಲಿರುವ ಇಂಟರ್ನ್ಶಿಪ್ ಕಾರ್ಯಕ್ರಮವು ಸ್ಪಷ್ಟವಾಗಿ ಕಾಂಗ್ರೆಸ್ನ ಪ್ರಸ್ತಾವಿತ 'ಪೆಹ್ಲಿ ನೌಕ್ರಿ ಪಕ್ಕಿ' ಅಪ್ರೆಂಟಿಸ್ಶಿಪ್ ಕಾರ್ಯಕ್ರಮವನ್ನು ಆಧರಿಸಿದೆ ಎಂದು ರಮೇಶ್ ಹೇಳಿದ್ದಾರೆ.
" ಕಾಂಗ್ರೆಸ್ ಪ್ರತಿಪಾದಿಸಿದಂತೆ ಎಲ್ಲಾ ಡಿಪ್ಲೊಮಾ ಹೊಂದಿರುವವರಿಗೆ ಮತ್ತು ಪದವೀಧರರಿಗೆ ನೌಕರಿ ನೀಡುವ ವ್ಯವಸ್ಥಿತ ಗ್ಯಾರಂಟಿಯ ಬದಲಿಗೆ 1 ಕೋಟಿ ಇಂಟರ್ನ್ಶಿಪ್ ನ ಅನಿಯಂತ್ರಿತ ಗುರಿಯೊಂದಿಗೆ ಮುಖಪುಟದಲ್ಲಿ ಸುದ್ದಿಯಾಗಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಬಿಜೆಪಿಯ ಟ್ರೇಡ್ ಮಾರ್ಕ್ ಶೈಲಿ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ .
ನಾನ್ ಬಯೋಲಾಜಿಕಲ್ ಪ್ರಧಾನಿಯಾಗಲೀ ಅಥವಾ ಅವರ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಾಗಲೀ ಉದ್ಯೋಗಗಳನ್ನು ಉಲ್ಲೇಖಿಸದಿದ್ದರೂ ಹತ್ತು ವರ್ಷಗಳ ನಿರಾಕರಣೆಯ ನಂತರ ಕೇಂದ್ರ ಸರ್ಕಾರವು ಅಂತಿಮವಾಗಿ ಸಾಮೂಹಿಕ ನಿರುದ್ಯೋಗವನ್ನು ತಕ್ಷಣದ ಗಮನ ಅಗತ್ಯವಿರುವ ಪ್ರಮುಖ ರಾಷ್ಟ್ರೀಯ ಬಿಕ್ಕಟ್ಟು ಎಂದು ಸದ್ದಿಲ್ಲದೆ ಒಪ್ಪಿಕೊಂಡಂತೆ ತೋರುತ್ತಿದೆ ಎಂದೂ ರಮೇಶ್ ಮೋದಿ ಸರಕಾರವನ್ನು ಕುಟುಕಿದ್ದಾರೆ.
ಬಜೆಟ್ ಭಾಷಣವು ಕ್ರಿಯೆಗಿಂತ ಬರೀ ಮಾತುಗಳ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎಂದು ಜೈರಾಮ್ ಟೀಕಿಸಿದ್ದಾರೆ.