8ನೇ ವೇತನ ಆಯೋಗ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ: ಕನಿಷ್ಠ ವೇತನ, ಗರಿಷ್ಠ ವೇತನದಲ್ಲಿ ಆಕರ್ಷಕ ಹೆಚ್ಚಳ!
ಹೊಸ ಸಂಬಳವನ್ನು ಲೆಕ್ಕಚಾರದ ಮಾಹಿತಿ ಇಲ್ಲಿದೆ...

ಸಾಂದರ್ಭಿಕ ಚಿತ್ರ | PC ; freepik.com
ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ 10 ವರ್ಷಕ್ಕೊಮ್ಮೆ ತನ್ನ ಉದ್ಯೋಗಿಗಳ ವೇತನ ಪರಿಷ್ಕರಿಸಲು ವೇತನ ಆಯೋಗವನ್ನು ರಚಿಸುತ್ತದೆ. ವೇತನ ಪರಿಷ್ಕರಿಸುವುದರ ಜೊತೆಗೆ, ಪ್ರತಿ ವೇತನ ಆಯೋಗ ಪರಿಷ್ಕೃತ ಪಿಂಚಣಿಯನ್ನೂ ನಿರ್ಧರಿಸುತ್ತದೆ.
7ನೇ ವೇತನ ಆಯೋಗವನ್ನು 2016 ರಲ್ಲಿ ರಚಿಸಲಾಗಿತ್ತು. ಅದರ ಅವಧಿ 2026 ರಲ್ಲಿ ಕೊನೆಗೊಳ್ಳಲಿದೆ. ಈಗ 8ನೇ ವೇತನ ಆಯೋಗವನ್ನು ರಚಿಸುವ ಘೊಷಣೆ ಹೊರಬಿದ್ದಿದೆ. ಬಜೆಟ್ ಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಆದರೆ, ಯಾವಾಗ ಈ ಆಯೋಗ ರಚನೆ ಆಗುತ್ತದೆ ಎಂಬುದು ನಿರ್ಧಾರವಾಗಿಲ್ಲ.
2026ರ ಜನವರಿಯಿಂದಲೇ ಹೊಸ ಆಯೋಗದ ಶಿಫಾರಸುಗಳು ಜಾರಿಯಾಗುತ್ತವೆಯೆ ಅಥವಾ 2026ರ ಅಂತ್ಯದವರೆಗೂ 7ನೇ ವೇತನ ಆಯೋಗದ ಶಿಫಾರಸುಗಳೇ ಮುಂದುವರಿಯಲಿವೆಯೆ ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.
ಈಗ, 8ನೇ ವೇತನ ಆಯೋಗ ದ ಶಿಫಾರಸುಗಳು ಜಾರಿಯಾದ ಮೇಲೆ ಕನಿಷ್ಠ ವೇತನ, ಗರಿಷ್ಠ ವೇತನ ಹಾಗೂ ನಿವೃತ್ತಿ ವೇತನದಲ್ಲಿ ಆಕರ್ಷಕ ಹೆಚ್ಚಳ ಆಗಲಿದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ 49 ಲಕ್ಷಕ್ಕೂ ಅಧಿಕ ಮತ್ತು 65 ಲಕ್ಷ ನಿವೃತ್ತ ನೌಕರರು ಪಟ್ಟಿಯಲ್ಲಿದ್ದಾರೆ. ಹೀಗೆ ಒಂದು ಕೋಟಿಗೂ ಅಧಿಕ ಮಂದಿ 8ನೇ ವೇತನ ಆಯೋಗದ ಲಾಭ ಪಡೆಯಲಿದ್ದಾರೆ. ಅಲ್ಲದೆ ವಿವಿಧ ರಾಜ್ಯ ಸರ್ಕಾರಗಳ ನೌಕರರ ವೇತನ ಕೂಡ 8ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಬದಲಾಗುವ ಸಾಧ್ಯತೆ ಇದೆ.
7ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನ 18,000 ರೂ ಮತ್ತು ಗರಿಷ್ಠ ವೇತನ 2.5 ಲಕ್ಷ ಇದೆ. ವೇತನ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುವುದು ಫಿಟ್ಮೆಂಟ್ ಫ್ಯಾಕ್ಟರ್. ಪ್ರಸ್ತುತ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ. ಇದು 8ನೇ ವೇತನ ಆಯೋಗದಲ್ಲಿ 2.86ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಈಗಿನ 18,000 ವೇತನ 41,000 ದಿಂದ 51,480ರವರೆಗೆ ಯಾವ ನಿರ್ದಿಷ್ಠ ಫಿಟ್ಮೆಂಟ್ ಫ್ಯಾಕ್ಟರ್ ಅನ್ವಯವಾಗಲಿವೆ ಎಂಬುದರ ಮೇಲೆ ಹೆಚ್ಚಳ ಕಾಣಲಿದೆ.
ಸರ್ಕಾರಿ ನೌಕರರ ಸಂಬಳ ಮತ್ತು ಪಿಂಚಣಿಗಳನ್ನು ಸರಿಹೊಂದಿಸಲು ಫಿಟ್ಮೆಂಟ್ ಫ್ಯಾಕ್ಟರ್ ನಿರ್ಣಾಯಕ. ಇದು ಅವರಿಗೆ ಒದಗಿಸಲಾದ ಆರ್ಥಿಕ ಪ್ರಯೋಜನಗಳ ಲೆಕ್ಕಾಚಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. 7ನೇ ವೇತನ ಆಯೋಗದ ಅನುಷ್ಠಾನದೊಂದಿಗೆ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು 2.57ಕ್ಕೆ ನಿಗದಿಪಡಿಸಲಾಯಿತು, ಇದು ಪಿಂಚಣಿ ಮತ್ತು ಸಂಬಳಗಳಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಯಿತು.
ಪಿಂಚಣಿಗಳನ್ನು 3,500 ರೂ.ಗಳಿಂದ 9,000 ರೂ.ಗಳಿಗೆ ಹೆಚ್ಚಿಸಲಾಯಿತು, ಕನಿಷ್ಠ ಮೂಲ ವೇತನವನ್ನು ಮಾಸಿಕ ರೂ.7,000 ರಿಂದ ರೂ.18,000 ಕ್ಕೆ ಹೆಚ್ಚಿಸಲಾಯಿತು. ಹಾಗೆಯೇ ಗರಿಷ್ಠ ಪಿಂಚಣಿ ಮತ್ತು ಗರಿಷ್ಠ ವೇತನ ಎರಡನ್ನೂ ಕ್ರಮವಾಗಿ ರೂ.1,25,000 ಮತ್ತು ರೂ.2,50,000ಕ್ಕೆ ಹೆಚ್ಚಿಸಲಾಯಿತು. 8ನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ 2.28 ರಿಂದ 2.86 ವರೆಗೆ ಇರಬಹುದು ಎನ್ನಲಾಗಿದೆ.
ಇದರರ್ಥ ಕನಿಷ್ಠ ಮೂಲ ವೇತನ 18,000 ರೂ ಇದ್ದದ್ದು 41,000 ರೂ ಗಳಿಂದ 51,480 ರು ವರೆಗೆ ಹೆಚ್ಚಾಗಬಹುದು, ಅನ್ವಯವಾಗಲಿರುವ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಅವಲಂಬಿಸಿ ಈ ಏರಿಕೆ ಇರುತ್ತದೆ.
8ನೇ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್ ಏನು?:
ಪೇ ಮ್ಯಾಟ್ರಿಕ್ಸ್ ಒಂದು ರಚನಾತ್ಮಕ ಕೋಷ್ಟಕವಾಗಿದೆ. ಇದು ವಿವಿಧ ಹುದ್ದೆಗಳು ಮತ್ತು ಹಿರಿತನಕ್ಕೆ ಅನುಗುಣವಾಗಿ ವೇತನ ಮಟ್ಟವನ್ನು ವಿವರಿಸುತ್ತದೆ. ಲೆವೆಲ್ 1ರಿಂದ ಲೆವೆಲ್ 18ರವರೆಗೆ ಆಯಾ ಹುದ್ದೆಗೆ ತಕ್ಕಂತೆ ಸಂಬಳ ಮತ್ತು ಭತ್ಯೆ ಇರುತ್ತದೆ
ಪ್ಯೂನ್, ವಾಚ್ಮನ್, ಹೆಲ್ಪರ್, ಕ್ಲೀನರ್ ಥರದ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯಿರುವ ಲೆವೆಲ್ 1ರಲ್ಲಿ 8ನೇ ವೇತನ ಆಯೋಗದ ಪ್ರಕಾರ ಸಂಬಳದಲ್ಲಿ ಆಗಬಹುದಾದ ಬದಲಾವಣೆ ಲೆಕ್ಕ ಹಾಕುವುದಾದರೆ, ಕನಿಷ್ಠ ಸಂಬಳ 18,000, ಇದನ್ನು ಫಿಟ್ಮೆಂಟ್ ಫ್ಯಾಕ್ಟರ್ 2.57ರಿಂದ ಗುಣಿಸಿದರೆ, ಹೊಸ ಸಂಬಳ 46,260 ಆಗಲಿದೆ. ಆದರೆ ಯಾವ ಫಿಟ್ಮೆಂಟ್ ಫ್ಯಾಕ್ಟರ್ ಅನ್ಯವಾಗಲಿದೆ ಎಂಬುದರ ಮೇಲೆ ಹೊಸ ಸಂಬಳ ನಿರ್ಧಾರವಾಗಲಿದೆ.
ಇನ್ನು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಇವರೆಲ್ಲವೂ 18ನೇ ಲೆವಲ್ ನಲ್ಲಿ ಬರುತ್ತಾರೆ.
18ನೇ ಲೆವೆಲ್ ನಲ್ಲಿ ಗರಿಷ್ಠ ಸಂಬಳ 2.5 ಲಕ್ಷ. ಇದು ಹೆಚ್ಚಳವಾಗಿ 6.40 ಲಕ್ಷ ಆಗುತ್ತದೆ.
8ನೇ ವೇತನ ಆಯೋಗದ ವೇತನ ಸ್ಟ್ರಕ್ಚರ್ ಇಲ್ಲಿದೆ:
ಮೂಲ ವೇತನ: ಈಗಿರುವ ಮೂಲ ವೇತನಕ್ಕೆ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಅನ್ವಯಿಸುವ ಮೂಲಕ ನಿರ್ಧರಿಸಲಾಗುತ್ತದೆ.
ಭತ್ಯೆಗಳು: ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಪ್ರಯಾಣ ಭತ್ಯೆ (TA) ಇವೆಲ್ಲವನ್ನೂ ಹೊಸ ಮೂಲ ವೇತನದ ಆಧಾರದ ಮೇಲೆ ಮರು ಲೆಕ್ಕಾಚಾರ ಮಾಡಲಾಗುತ್ತದೆ.
ಒಟ್ಟು ಸಂಬಳ: ಮೂಲ ವೇತನ ಮತ್ತು ಭತ್ಯೆಗಳ ಒಟ್ಟು ಮೊತ್ತವಾಗಿರುತ್ತದೆ.
8 ನೇ ವೇತನ ಆಯೋಗದ ಪಿಂಚಣಿ ಪರಿಷ್ಕರಣೆಗಳ ಬಗ್ಗೆ ನೋಡುವುದಾದರೆ, 7ನೇ ವೇತನ ಆಯೋಗದ ಅಡಿಯಲ್ಲಿ ಇದ್ದ ಕನಿಷ್ಠ ಪಿಂಚಣಿ 9,000 ರೂ ಈಗ 2.28ರ ಫಿಟ್ಮೆಂಟ್ ಫ್ಯಾಕ್ಟರ್ ನೊಂದಿಗೆ ಸುಮಾರು 20,500 ರೂ. ಗಳಿಗೆ ಏರಬಹುದು.