ವಕೀಲರ, ಬಾರ್ ಕೌನ್ಸಿಲ್ ಪ್ರತಿಭಟನೆ ಬಳಿಕ ವಕೀಲರ ಕಾಯ್ದೆಗೆ ತಿದ್ದುಪಡಿಗಳನ್ನು ಹಿಂದೆಗೆದುಕೊಂಡ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ವಕೀಲರ ಪ್ರತಿಭಟನೆಗಳು ಮತ್ತು ಬಾರ್ ಕೌನ್ಸಿಲ್ನ ಆಕ್ಷೇಪಣೆಗಳ ಬಳಿಕ ವಿವಾದಾಸ್ಪದ ಕರಡು ವಕೀಲರ ಕಾಯ್ದೆ ತಿದ್ದುಪಡಿ ಮಸೂದೆ,2025ನ್ನು ಕೇಂದ್ರ ಸರಕಾರವು ಶನಿವಾರ ಹಿಂದೆಗೆದುಕೊಂಡಿದೆ.
ಕರಡು ಶಾಸನಕ್ಕೆ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ ಬಳಿಕ ಸಂಬಂಧಿಸಿದವರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಹೊಸದಾಗಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವಾಲಯವು ತಿಳಿಸಿದೆ.
ಫೆ.13ರಿಂದ 28ರವರೆಗೆ ಸಾರ್ವಜನಿಕ ಸಮಾಲೋಚನೆಗಾಗಿ ಮಸೂದೆಯನ್ನು ಪ್ರಕಟಿಸಲಾಗಿತ್ತು. ಕರಡು ಶಾಸನವು 1961ರ ವಕೀಲರ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ಬಯಸಿದ್ದು,ಇದನ್ನು ವಕೀಲರು ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಟೀಕಿಸಿದ್ದವು.
ಬಾರ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಮನನ್ಕುಮಾರ ಮಿಶ್ರಾ ಅವರು ಬುಧವಾರ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಅವರಿಗೆ ಬರೆದಿದ್ದ ಪತ್ರದಲ್ಲಿ,ಮಸೂದೆಯು ಬಿಸಿಐನ ಸ್ವಾಯತ್ತತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಮಸೂದೆಯು ಬಿಸಿಐಗೆ ಗರಿಷ್ಠ ಮೂವರು ಸದಸ್ಯರನ್ನು ನಾಮ ನಿರ್ದೇಶನ ಮಾಡಲು,ಕೌನ್ಸಿಲ್ಗೆ ನಿರ್ದೇಶನಗಳನ್ನು ಹೊರಡಿಸಲು ಮತ್ತು ವಿದೇಶಿ ವಕೀಲರು ಹಾಗೂ ಕಾನೂನು ಸಂಸ್ಥೆಗಳಿಗೆ ನಿಬಂಧನೆಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಅವಕಾಶವನ್ನು ಒದಗಿಸಿದೆ. ಕರಡು ಮಸೂದೆಯು ವಿದೇಶಿ ಕಾನೂನು ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ವಕೀಲರ ಸೇರ್ಪಡೆಗಾಗಿ ‘ಕಾನೂನು ವೃತ್ತಿಪರ’ ವ್ಯಾಖ್ಯಾನವನ್ನೂ ವಿಸ್ತರಿಸಿದೆ.
ವಕೀಲರ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯು ನ್ಯಾಯಾಲಯದ ಕಲಾಪಗಳಿಗೆ ಬಹಿಷ್ಕಾರ ಅಥವಾ ಕಲಾಪಗಳಿಂದ ದೂರವುಳಿಯುವುದನ್ನು ನಿಷೇಧಿಸುವ ಹೊಸ ಕಲಮ್ನ್ನು ಪರಿಚಯಿಸಲು ಉದ್ದೇಶಿಸಿತ್ತು.
ಮಸೂದೆಯನ್ನು ಕಳಪೆಯಾಗಿ ರಚಿಸಲಾಗಿದೆ ಎಂದು ಟೀಕಿಸಿದ್ದ ಪ್ರತಿಪಕ್ಷ ಕಾಂಗ್ರೆಸ್, ಸಂಬಂಧಿಸಿದವರೊಂದಿಗೆ ಹೆಚ್ಚಿನ ಸಮಾಲೋಚನೆಗಳು ನಡೆಯುವವರೆಗೆ ಅದನ್ನು ತಡೆಹಿಡಿಯುವಂತೆ ಆಗ್ರಹಿಸಿತ್ತು.
ವಕೀಲರು ತಮ್ಮ ಕುಂದುಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ಎತ್ತಲು ಸೂಕ್ತ ವೇದಿಕೆಯನ್ನು ರಚಿಸುವ ಬದಲು ಮಸೂದೆಯು ಕಲಾಪಗಳನ್ನು ಬಹಿಷ್ಕರಿಸುವ ಅಥವಾ ಕಲಾಪಗಳಿಂದ ದೂರವುಳಿಯುವ ವಕೀಲರ ಮೇಲೆ ದಂಡನೀಯ ಕ್ರಮಗಳನ್ನು ಹೇರುವ ಮೂಲಕ ಕಾನೂನುಬದ್ಧ ಬೇಡಿಕೆಗಳನ್ನು ಎತ್ತುವ ವಕೀಲರ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎಂದು ಕಾಂಗ್ರೆಸ್ನ ಕಾನೂನು ಘಟಕದ ಮುಖ್ಯಸ್ಥ ಅಭಿಷೇಕ ಮನು ಸಿಂಘ್ವಿಯವರು ಗುರುವಾರ ಹೇಳಿದ್ದರು.