ಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರಕಾರ | ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಐಯುಎಂಎಲ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಪೌರತ್ವ ನೀಡಲು ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಇದರ ವಿರುದ್ಧ ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗವನ್ನು ಸಂಪರ್ಕಿಸಲಾಗುವುದು ಎಂದು ಹೇಳಿದೆ.
ಕೇಂದ್ರ ಗೃಹ ಸಚಿವಾಲಯ ಬುಧವಾರ 300ಕ್ಕೂ ಅಧಿಕ ಅರ್ಜಿದಾರರಿಗೆ ಪೌರತ್ವದ ಪ್ರಮಾಣಪತ್ರಗಳನ್ನು ನೀಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾದ ಒಂದು ದಿನದ ಬಳಿಕ ಐಯುಎಂಎಲ್ ಮೊದಲ ಬಾರಿಗೆ ಇದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಕಾಯ್ದೆಯಲ್ಲಿ ಮುಸ್ಲಿಂರನ್ನು ಕೈಬಿಟ್ಟಿರುವುದು ಸಂವಿಧಾನದ ವಿಧಿ 14ರ ಅಡಿಯ ಸಮಾನತೆಯ ಹಕ್ಕಿಗೆ ವಿರುದ್ಧವಾದುದು ಎಂದು ಪ್ರತಿಪಾದಿಸಿ ಅದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿದೆ. ಅನಂತರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಇತರ ಹಲವರು ಅರ್ಜಿ ಸಲ್ಲಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ ರಿಟ್ ಅರ್ಜಿದಾರರ ಗುಂಪಿನಲ್ಲಿ ಐಯುಎಂಎಲ್ ಪ್ರಮುಖ ಅರ್ಜಿದಾರನಾಗಿದೆ.
ಮಾರ್ಚ್ನಲ್ಲಿ ಕೇಂದ್ರ ಸರಕಾರ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೆ ತರಲು ನಿಯಮಗಳನ್ನು ಅಧಿಸೂಚಿಸಿದ ಒಂದು ದಿನದ ಬಳಿಕ ಐಯುಎಂಎಲ್ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ಕೂಡಲೇ ತಡೆ ನೀಡುವಂತೆ ಕೋರಿ ಸಲ್ಲಿಸಿದ ಬಾಕಿ ಇರುವ ರಿಟ್ ಅರ್ಜಿಗೆ ಸೇರ್ಪಡೆಯಾಗಿ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಕಾಯ್ದೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಐಯುಎಂಎಲ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)2019 ನೆರೆಯ ದೇಶಗಳಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ರಕ್ಷಣೆ ನೀಡುವ ಕೇಂದ್ರ ಸರಕಾರದ ಪ್ರತಿಪಾದನೆ ಆಧಾರ ರಹಿತ ಎಂದು ಪ್ರತಿಪಾದಿಸಿದೆ.
ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರದ ಪ್ರತಿಪಕ್ಷಗಳಲ್ಲಿ ಐಯುಎಂಎಲ್ ಎರಡನೇ ಅತಿ ದೊಡ್ಡ ಪಕ್ಷವಾಗಿದೆ.