ಭಾರತದ ಮುಖ್ಯ ತನಿಖಾಧಿಕಾರಿ ಹುದ್ದೆ ಸೃಷ್ಟಿಗೆ ಕೇಂದ್ರ ಚಿಂತನೆ; CBI, ED ನಡುವೆ ಸಮನ್ವಯತೆ ಸಾಧಿಸುವ ಉದ್ದೇಶ
ಹಾಲಿ ED ವರಿಷ್ಠ ಸಂಜಯ್ ಶರ್ಮಾ ಪ್ರಪ್ರಥಮ ಸಿಐಒ ಆಗುವ ಸಾಧ್ಯತೆ
CBI , ED | Photo : ANI
ಹೊಸದಿಲ್ಲಿ: ಭಾರತದ ಮುಖ್ಯಾ ತನಿಖಾಧಿಕಾರಿ (ಸಿಐಒ) ಹುದ್ದೆಯನ್ನು ಹೊಸದಾಗಿ ಸೃಷ್ಟಿಸುವ ಬಗ್ಗೆ ಕೇಂದ್ರ ಸರಕಾರವು ಚಿಂತಿಸುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಈಡಿ)ದ ಕಾರ್ಯನಿರ್ವಹಣೆಯಲ್ಲಿ ಸಮನ್ವಯತೆ ತರುವ ಉದ್ದೇಶದಿಂದ ಈ ಹುದ್ದೆಯನ್ನು ಸೃಷ್ಟಿಸಲಾಗುವುದು. ಅದರಂತೆ ಈ ಎರಡೂ ತನಿಖಾ ಸಂಸ್ಥೆಗಳ ವರಿಷ್ಠರುಗಳು ತಮ್ಮ ವರದಿ ಹಾಗೂ ಕಾರ್ಯವಿವರಗಳನ್ನು ಭಾರತೀಯ ಮುಖ್ಯ ತನಿಖಾಧಿಕಾರಿಗೆ ಸಲ್ಲಿಸಬೇಕಾಗುತ್ತದೆ.
ಜಾರಿ ನಿರ್ದೇಶನಾಲಯದ ಹಾಲಿ ವರಿಷ್ಠ ಸಂಜಯ್ಕುಮಾರ್ ಮಿಶ್ರಾ ಅವರನ್ನು ದೇಶದ ಮೊದಲ ಸಿಐಓ ಆಗಿ ನೇಮಕಗೊಳಿಸುವ ಸಾಧ್ಯತೆಯಿದೆ. ಸಂಜಯ್ ಕುಮಾರ್ ಮಿಶ್ರಾ ಅವರು ಸೆಪ್ಟೆಂಬರ್ ೧೫ರಂದು ಜಾರಿ ನಿರ್ದೇಶನಾಲಯದ ಹುದ್ದೆಯಿಂದ ನಿವೃತ್ತರಾಗಲಿದ್ದು, ಆನಂತರ ಅವರು ಸಿಐಒ ಸ್ಥಾನಕ್ಕೆ ನೇಮಕಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಿಬಿಐ ಹಾಗೂ ಈಡಿ ನಡುವೆ ಉತ್ತಮವಾದ ಸಮನ್ವಯತೆಯನ್ನು ತರುವುದೇ ಮುಖ್ಯ ತನಿಖಾಧಿಕಾರಿ ಹುದ್ದೆಯ ಸೃಷ್ಟಿಯ ಹಿಂದಿರುವ ಚಿಂತನೆಯಾಗಿದೆ ಎಂದು ಕೇಂದ್ರ ಸರಕಾರದ ಮೂಲಗನ್ನು ಉಲ್ಲೇಖಿಸಿ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಜಾರಿ ನಿರ್ದೇಶನಾಲಯವು ಪ್ರಾಥಮಿವಾಗಿ ಆರ್ಥಿಕ ವಂಚನೆ, ಕಪ್ಪುಹಣ ಬಿಳುಪು, ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ)ಯ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿದೆ. ಸಿಬಿಐ ಭ್ರಷ್ಟಾಚಾರ, ಕೊಲೆ ಮತ್ತಿತರ ಅಪರಾಧಗಳ ಬಗ್ಗೆ ತನಿಖೆ ನಡೆಸುತ್ತದೆ. ಹಲವು ಪ್ರಕರಣಗಳ ತನಿಖೆಗಳು ಎರಡೂ ಇಲಾಖೆಗಳಿಗೆ ಸಂಬಂಧಪಡುವುದರಿಂದ ಅವು ಇಂತಹ ಹುದ್ದೆಯ ಸೃಷ್ಟಿಯನ್ನು ಅಗತ್ಯವಾಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಪ್ರಪ್ರಥಮ ಸಿಐಒ ಆಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿರುವ ಮಿಶ್ರಾ ಅವರನ್ನು ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸೆಪ್ಟೆಂಬರ್ ೧೫ರವರೆಗೆ ಮುಂದುವರಿಯಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಆದರೆ ದೇಶದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಅಧಿಕಾರಾವಧಿಯನ್ನು ಮೂರನೆ ಬಾರಿಗೆ ವಿಸ್ತರಿಸಲು ಅವಕಾಶ ನೀಡಬೇಕೆಂಬ ಕೇಂದ್ರ ಸರಕಾರದ ಮನವಿಯನ್ನು ಅದು ತಳ್ಳಿಹಾಕಿತ್ತು.