ಡಿಎನ್ಎ, ಮುಖ ಹೋಲಿಕೆ ವ್ಯವಸ್ಥೆಗಳನ್ನು ಜಾರಿಗೊಳಿಸಲು ಕೇಂದ್ರ ಸಿದ್ಧತೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕ್ರಿಮಿನಲ್ ಪ್ರೊಸೀಜರ್ ಗುರುತು ಕಾಯ್ದೆ (ಸಿಆರ್ಪಿಐ)ಯನ್ನು ಸಂಸತ್ ಅಂಗೀಕರಿಸಿದ ಒಂದು ವರ್ಷದ ಬಳಿಕ, ದೇಶಾದ್ಯಂತದ 1,300ಕ್ಕೂ ಅಧಿಕ ಪೊಲೀಸ್ ಠಾಣೆಗಳಲ್ಲಿ ‘ಡಿಎನ್ಎ ಮತ್ತು ಮುಖ ಹೋಲಿಕೆ’ ವ್ಯವಸ್ಥೆಗಳನ್ನು ಜಾರಿಗೆ ತರಲು ಕೇಂದ್ರ ಸರಕಾರವು ಸಿದ್ಧತೆ ನಡೆಸಿದೆ.
ಈ ಕಾಯ್ದೆಯ ವಿಧಿಗಳನ್ನು ಪ್ರಾಯೋಗಿಕವಾಗಿ ಸಂಪೂರ್ಣವಾಗಿ ಇನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಇದರ ಜಾರಿಯಲ್ಲಿ ಸಾಗಣೆ ಮತ್ತು ಸಂಪರ್ಕ ಸಮಸ್ಯೆಗಳಿವೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅಕ್ಷಿಪಟಲ (ರೆಟಿನ) ಮತ್ತು ಕಣ್ಣು ಪಾಪೆ (ಐರಿಸ್) ಸ್ಕ್ಯಾನ್ ಸೇರಿದಂತೆ ಬಂಧಿತ ವ್ಯಕ್ತಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಪಡೆಯಲು, ಸಂಗ್ರಹಿಸಿಡಲು ಮತ್ತು ವಿಶ್ಲೇಷಿಸಲು ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಈ ಕಾನೂನು ಅವಕಾಶ ನೀಡುತ್ತದೆ. ಅದನ್ನು 2022 ಎಪ್ರಿಲ್ನಲ್ಲಿ ಸಂಸತ್ ಅಂಗೀಕರಿಸಿತ್ತು.
2022 ಸೆಪ್ಟಂಬರ್ನಲ್ಲಿ ನಿಯಮಗಳನ್ನು ಹೊರಡಿಸಲಾಗಿತ್ತು. ಬಂಧಿತರ ಜೈವಿಕ ಮತ್ತು ದೈಹಿಕ ಅಳತೆಗಳನ್ನು ಪಡೆಯುವಾಗ ಪೊಲೀಸರು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ವನ್ನು ಅಂತಿಮಗೊಳಿಸುವ ಕಾರ್ಯವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ)ಗೆ ವಹಿಸಲಾಗಿತ್ತು.
ಡಿಎನ್ಎ ಮಾದರಿಗಳ ಸಂಗ್ರಹಣೆ ಮತ್ತು ಮುಖ ಹೋಲಿಕೆ ಪ್ರಕ್ರಿಯೆ ಬಗ್ಗೆ ಕಾಯ್ದೆ ಮತ್ತು ನಿಯಮಗಳು ಸ್ಪಷ್ಟವಾಗಿ ಏನೂ ಹೇಳುವುದಿಲ್ಲ. ಆದರೆ, ನಂತರ ರಾಜ್ಯಗಳ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಗಳಲ್ಲಿ, ದೇಶಾದ್ಯಂತ ಇರುವ 1,300ಕ್ಕೂ ಅಧಿಕ ಪೊಲೀಸ್ ಠಾಣೆಗಳಲ್ಲಿ ಇವುಗಳನ್ನು ಪರಿಚಯಿಸಲಾಗುವುದು ಎಂದು ಎನ್ಸಿಆರ್ಬಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಯ್ದೆಯ ಯಶಸ್ವಿ ಅನುಷ್ಠಾನಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯವು ಸಮನ್ವಯ ಸಮಿತಿಯೊಂದನ್ನು ರಚಿಸಿದೆ. ಸಮಿತಿಯಲ್ಲಿ ರಾಜ್ಯ ಪೊಲೀಸರು, ಕೇಂದ್ರೀಯ ಕಾನೂನು ಅನುಷ್ಠಾನ ಸಂಸ್ಥೆಗಳು ಮತ್ತು ಇತರ ಪ್ರಮುಖ ಭಾಗೀದಾರರ ಪ್ರತಿನಿಧಿಗಳಿರುತ್ತಾರೆ. ಡಿಎನ್ಎ ಮಾದರಿಗಳನ್ನು ಪಡೆಯುವುದಕ್ಕೆ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ರೂಪಿಸುವುದಕ್ಕಾಗಿ ತಾಂತ್ರಿಕ ಉಪ ಸಮಿತಿಯೊಂದನ್ನೂ ರಚಿಸಲಾಗಿದೆ.
ನೂರು ವರ್ಷಗಳ ಹಳೆಯ, ಕೈದಿಗಳ ಗುರುತು ಕಾಯ್ದೆ, 1920ರ ಸ್ಥಾನದಲ್ಲಿ ನೂತನ ಕಾಯ್ದೆ ಬಂದಿದೆ. ಹಳೆಯ ಕಾಯ್ದೆಯು ಶಿಕ್ಷೆಗೊಳಗಾದ ಕೈದಿಗಳ ಹಾಗೂ ಕೆಲವು ವರ್ಗಗಳ ಬಂಧಿತ ಮತ್ತು ಅಪರಾಧ ಸಾಬೀತಾಗದ ವ್ಯಕ್ತಿಗಳ ಬೆರಳಚ್ಚು, ಕಾಲ್ಬೆರಳಚ್ಚು ಮತ್ತು ಭಾವಚಿತ್ರಗಳನ್ನು ಮ್ಯಾಜಿಸ್ಟ್ರೇಟ್ರ ಆದೇಶದಡಿ ಪಡೆಯಲು ಅವಕಾಶ ನೀಡುತ್ತದೆ.