ದಿಲ್ಲಿ ಮೆಟ್ರೋ | ರಿತಾಲ-ನರೇಲ-ಕುಂಡ್ಲಿ ಮೆಟ್ರೊ ಕಾರಿಡಾರ್ ಪ್ರಸ್ತಾವನೆಗೆ ಕೇಂದ್ರ ಸರಕಾರ ಅನುಮೋದನೆ
PC : PTI
ಹೊಸದಿಲ್ಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ-ಡಿಡಿಎ ಸಲ್ಲಿಸಿದ್ದ ರಿತಾಲ-ನರೇಲ-ಕುಂಡ್ಲಿ ಮೆಟ್ರೊ ಕಾರಿಡಾರ್ ನಿರ್ಮಾಣದ ಪ್ರಸ್ತಾವವನ್ನು ಕೇಂದ್ರ ಸರಕಾರವು ಅನುಮೋದಿಸಿದೆ ಎಂದು ಶನಿವಾರ ರಾಜ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮೆಟ್ರೊ ಕಾರಿಡಾರ್ ಮಾರ್ಗ ನಿರ್ಮಾಣದ ಕುರಿತು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಹಲವಾರು ಬಾರಿ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿದ್ದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ರಿತಾಲ-ನರೇಲ-ಕುಂಡ್ಲಿ ಮೆಟ್ರೊ ಕಾರಿಡಾರ್ ನಿರ್ಮಾಣದ ಅಂದಾಜು ವೆಚ್ಚ ರೂ. 6,231 ಕೋಟಿ ಆಗಿದ್ದು, ಈ ಪೈಕಿ ದಿಲ್ಲಿಯ ಭಾಗದ ಅಂದಾಜು ವೆಚ್ಚ ರೂ. 5,685.22 ಕೋಟಿ ಆಗಿರಲಿದೆ. ಹರ್ಯಾಣ ಭಾಗದ ಅಂದಾಜು ವೆಚ್ಚ ರೂ. 545.77 ಕೋಟಿ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾಲಿ ಅಸ್ತಿತ್ವದಲ್ಲಿರುವ ಕೆಂಪು ಮಾರ್ಗದ ವಿಸ್ತರಣೆಯನ್ನಾಗಿ ಈ ಮಾರ್ಗವನ್ನು ಯೋಜಿಸಲಾಗಿದೆ.
ದಿಲ್ಲಿ ಭಾಗದ ಅಂದಾಜು ನಿರ್ಮಾಣ ವೆಚ್ಚದಲ್ಲಿ ಸುಮಾರು ಶೇ. 40ರಷ್ಟು ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ. ಈ ಯೋಜನೆಗೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ವು ರೂ. 1,000 ಕೋಟಿ ಕೊಡುಗೆ ನೀಡಲಿದ್ದು, ಉಳಿದ ಶೇ. 37.5ರಷ್ಟು ವೆಚ್ಚವನ್ನು ದ್ವಿಪಕ್ಷೀಯ/ಬಹುಪಕ್ಷೀಯ ಸಾಲಗಳ ಮೂಲಕ ಬಂಡವಾಳವಾಗಿ ಹೂಡಿಕೆ ಮಾಡಲಾಗುತ್ತದೆ. ಇದರೊಂದಿಗೆ ಶೇ. 20ರಷ್ಟು ಅಂದಾಜು ವೆಚ್ಚವನ್ನು ದಿಲ್ಲಿ ಸರಕಾರ ಭರಿಸಲಿದೆ ಎಂದು ಈ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಹರ್ಯಾಣ ಭಾಗದ ಅಂದಾಜು ನಿರ್ಮಾಣ ವೆಚ್ಚದ ಪೈಕಿ ಶೇ. 80ರಷ್ಟು ಅನುದಾನವನ್ನು ಹರ್ಯಾಣ ರಾಜ್ಯ ಸರಕಾರ ಭರಿಸಲಿದ್ದರೆ, ಉಳಿದ ಶೇ. 20ರಷ್ಟು ವೆಚ್ಚವು ಕೇಂದ್ರ ಸರಕಾರದ ಅನುದಾನದ ಮೂಲಕ ಲಭ್ಯವಾಗಲಿದೆ.
21 ನಿಲ್ದಾಣಗಳನ್ನು ಹೊಂದಿರಲಿರುವ ಈ 26.5 ಕಿಮೀ ದೂರದ ಮಾರ್ಗವು ನಾಲ್ಕು ವರ್ಷಗಳೊಳಗೆ ಮುಕ್ತಾಯಗೊಳ್ಳಲಿದೆ. ಉಳಿದ ನಗರಗಳೊಂದಿಗೆ ನರೇಲ, ಬವಾನ ಹಾಗೂ ಆಲಿಪುರ್ ಪ್ರದೇಶಗಳಿಗೆ ಈ ಮಾರ್ಗವು ವ್ಯಾಪಕವಾಗಿ ಸಂಪರ್ಕ ಸಾಧ್ಯತೆಯನ್ನು ಸುಧಾರಿಸಲಿದ್ದು, ಮೂಲಸೌಕರ್ಯದ ಉತ್ಕರ್ಷಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ.
ಈ ಯೋಜನೆಯಿಂದಾಗಿ ನರೇಲ-ಬವಾನ ಉಪನಗರದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿರುವ ರೋಹಿಣಿ ಉಪನಗರದ ಅಗತ್ಯಗಳನ್ನು ಪೂರೈಸಲಿದೆ ಎನ್ನಲಾಗಿದೆ.