100ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ: ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ ಎಂದು ʼಎಕ್ಸ್ʼಗೆ ಕೇಂದ್ರ ಸರಕಾರ ತರಾಟೆ
ಹೊಸದಿಲ್ಲಿ: ಕೆಲವು ದಿನಗಳಿಂದ ವಿಮಾನ ಯಾನ ಸಂಸ್ಥೆಗಳು ಬಾಂಬ್ ಬೆದರಿಕೆಯ ಮಹಾಪೂರವನ್ನೇ ಸ್ವೀಕರಿಸುತ್ತಿದ್ದು, ಈ ಪೈಕಿ ಬಹುತೇಕ ಹುಸಿ ಬಾಂಬ್ ಬೆದರಿಕೆ ಕರೆಗಳು ಎಕ್ಸ್ ಸಾಮಾಜಿಕ ಮಾಧ್ಯಮದ ಮೂಲಕ ಬಂದಿವೆ. ಹೀಗಾಗಿ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ʼಎಕ್ಸ್ʼ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ವಿಮಾನ ಯಾನ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್ ಹಾಗೂ ಮೆಟಾದ ಪ್ರತಿನಿಧಿಗಳೊಂದಿಗೆ ಜಂಟಿ ಕಾರ್ಯದರ್ಶಿ ಸಾಕೇತ್ ಎಸ್.ಭೋಂಡ್ವೆ ವರ್ಚುಯಲ್ ಸಭೆ ನಡೆಸಿದರು. ಈ ವೇಳೆ, ಪರಿಸ್ಥಿತಿಯು ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಿರುವಂತಿದೆ ಎಂದು ಕಿಡಿ ಕಾರಿದ ಅವರು, ಇಂತಹ ಅಪಾಯಕಾರಿ ವದಂತಿಗಳನ್ನು ತಡೆಯುವ ಕುರಿತು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರನ್ನು ಪ್ರಶ್ನಿಸಿದರು ಎಂದು ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಭಾರತೀಯ ವಿಮಾನ ಯಾನ ಸಂಸ್ಥೆಗಳ ಸುಮಾರು 120ಕ್ಕೂ ಹೆಚ್ಚು ವಿಮಾನಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿವೆ. ನಿನ್ನೆ ಕೂಡಾ, ಇಂಡಿಗೊ, ವಿಸ್ತಾರ ಹಾಗೂ ಏರ್ ಇಂಡಿಯಾ ಕಾರ್ಯಾಚರಿಸುವ 30 ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿದ್ದವು.
ನಾವು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಗಳನ್ನು ಪಾಲಿಸುತ್ತಿದ್ದೇವೆ. ಪ್ರಾಧಿಕಾರಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಹಾಗೂ ಭದ್ರತಾ ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದೆ ಎಂದು ವಿಮಾನ ಯಾನ ಸಂಸ್ಥೆಗಳು ಹೇಳಿವೆ.
ಈ ನಡುವೆ, ಪರಿಸ್ಥಿತಿಯ ಕುರಿತು ಸಂಕ್ಷಿಪ್ತ ವಿವರಣೆ ನೀಡಿದ ನಾಗರಿಕ ವಿಮಾನ ಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳದೆಯೇ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಹುಸಿ ಬಾಂಬ್ ಬೆದರಿಕೆ ಹಾಕುವವರನ್ನು ಪ್ರಯಾಣ ನಿರ್ಬಂಧ ಪಟ್ಟಿಗೆ ಸೇರ್ಪಡೆ ಮಾಡುವುದೂ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.