2026ರಿಂದ ಕೇಂದ್ರೀಯ ತೆರಿಗೆಗಳ ರಾಜ್ಯಗಳ ಪಾಲಿನಲ್ಲಿ ಕಡಿತಕ್ಕೆ ಕೇಂದ್ರದ ಚಿಂತನೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯಗಳು ಪಡೆಯುತ್ತಿರುವ ಆದಾಯವನ್ನು ಕಡಿತಗೊಳಿಸಲು ಕೇಂದ್ರ ಸರಕಾರವು ಮುಂದಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು thehindu.com ವರದಿ ಮಾಡಿದೆ.
ಪ್ರಸ್ತಾವವನ್ನು ಹಣಕಾಸು ಆಯೋಗಕ್ಕೆ ಸಲ್ಲಿಸಲು ಕೇಂದ್ರವು ಸಜ್ಜಾಗಿದ್ದು,ಇದು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಬಹುದು. ಆಯೋಗವು ತೆರಿಗೆ ಹಂಚಿಕೆ ಹಾಗೂ ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಬಂಧಗಳ ಇತರ ಅಂಶಗಳ ಕುರಿತು ಶಿಫಾರಸುಗಳನ್ನು ಮಾಡುತ್ತದೆ.
ಆರ್ಥಿಕ ತಜ್ಞ ಅರವಿಂದ ಪನಗಾರಿಯಾ ನೇತೃತ್ವದ ಆಯೋಗವು ಅ.31ರೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ. ಆಯೋಗದ ಶಿಫಾರಸುಗಳಿಗೆ ಸರಕಾರವು ಬದ್ಧವಾಗಿರಬೇಕಿದ್ದು,ಅವು ವಿತ್ತವರ್ಷ 2026-27ರಿಂದ ಅನುಷ್ಠಾನಗೊಳ್ಳಲಿವೆ.
ರಾಜ್ಯಗಳು ಪಡೆಯುತ್ತಿರುವ ತೆರಿಗೆ ಪಾಲನ್ನು ಈಗಿನ ಶೇ.41ರಿಂದ ಕನಿಷ್ಠ ಶೇ.40ಕ್ಕೆ ತಗ್ಗಿಸಲು ಕೇಂದ್ರವು ಶಿಫಾರಸು ಮಾಡಲಿದೆ ಎಂದು ತಿಳಿಸಿರುವ ಮೂಲಗಳು,ಮೋದಿ ನೇತೃತ್ವದ ಸಚಿವ ಸಂಪುಟವು ಮಾರ್ಚ್ ಅಂತ್ಯದೊಳಗೆ ಪ್ರಸ್ತಾವವನ್ನು ಅನುಮೋದಿಸುವ ಸಾಧ್ಯತೆಯಿದೆ ಮತ್ತು ಬಳಿಕ ಅದನ್ನು ಹಣಕಾಸು ಆಯೋಗಕ್ಕೆ ಕಳುಹಿಸಲಾಗುವುದು ಎಂದು ಹೇಳಿವೆ.
ರಾಜ್ಯಗಳ ತೆರಿಗೆ ಆದಾಯದ ಪಾಲಿನಲ್ಲಿ ಶೇ.1ರಷ್ಟು ಕಡಿತಗೊಳಿಸಿದರೆ ಅದರಿಂದ ಪ್ರಸಕ್ತ ವರ್ಷದ ನಿರೀಕ್ಷಿತ ತೆರಿಗೆ ಸಂಗ್ರಹದ ಆಧಾರದಲ್ಲಿ ಕೇಂದ್ರಕ್ಕೆ ಸುಮಾರು 350 ಶತಕೋಟಿ ರೂ.ಗಳು ಲಭಿಸಲಿವೆ. ವರ್ಷವಾರು ತೆರಿಗೆ ಸಂಗ್ರಹವನ್ನು ಅವಲಂಬಿಸಿ ಅಂತಿಮ ಮೊತ್ತವು ಬದಲಾಗಬಹುದು.
1980ರಲ್ಲಿ ಕೇಂದ್ರೀಯ ತೆರಿಗೆಗಳಲ್ಲಿ ಶೇ.20ರಷ್ಟಿದ್ದ ರಾಜ್ಯಗಳ ಪಾಲು ಈಗ ಶೇ.41ಕ್ಕೇರಿದೆ, ಆದರೆ ವಿಶೇಷವಾಗಿ ಆರ್ಥಿಕ ಹಿಂಜರಿತದ ವರ್ಷಗಳಲ್ಲಿ ಒಕ್ಕೂಟ ಸರಕಾರದ ವೆಚ್ಚ ಅಗತ್ಯಗಳು ಹೆಚ್ಚಾಗಿವೆ ಮತ್ತು ಇದು ರಾಜ್ಯಗಳ ಆದಾಯವನ್ನು ಕಡಿತಗೊಳಿಸುವ ಪ್ರಸ್ತಾವಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿದವು.
2024-25ನೇ ಸಾಲಿಗೆ ಸರಕಾರದ ವಿತ್ತೀಯ ಕೊರತೆ ಜಿಡಿಪಿಯ ಶೇ.4.8ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದ್ದು,ರಾಜ್ಯಗಳು ಶೇ.3.2ರಷ್ಟು ವಿತ್ತೀಯ ಕೊರತೆಯನ್ನು ಹೊಂದಿವೆ.
ಆರ್ಥಿಕತೆಯಲ್ಲಿ ಒಟ್ಟು ಸರಕಾರಿ ವೆಚ್ಚಗಳಲ್ಲಿ ರಾಜ್ಯಗಳ ಪಾಲು ಶೇ.60ಕ್ಕಿಂತ ಹೆಚ್ಚಿದ್ದು,ಸಾಮಾನ್ಯವಾಗಿ ಆರೋಗ್ಯ ಮತ್ತು ಶಿಕ್ಷಣದಂತಹ ಸಾಮಾಜಿಕ ಮೂಲಸೌಕರ್ಯಗಳಿಗೆ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದ್ದರೆ ಕೇಂದ್ರ ಸರಕಾರದ ವೆಚ್ಚಗಳು ಭೌತಿಕ ಮೂಲಸೌಕರ್ಯಗಳ ಮೇಲೆ ಹೆಚ್ಚು ಕೇಂದ್ರೀಕೃತಗೊಂಡಿವೆ. ಆದರೆ 2017,ಜುಲೈನಲ್ಲಿ ಜಿಎಸ್ಟಿ ಜಾರಿಗೊಂಡ ಬಳಿಕ ರಾಜ್ಯಗಳಿಂದ ಆದಾಯ ಸಂಗ್ರಹವು ಸೀಮಿತಗೊಂಡಿದೆ.
ಕೋವಿಡ್ ಸಾಂಕ್ರಾಮಿಕದ ಬಳಿಕ ಕೇಂದ್ರ ಸರಕಾರವು ಸೆಸ್ಗಳು ಮತ್ತು ಸರ್ಚಾರ್ಜ್ಗಳ ಪಾಲನ್ನು ಹಿಂದಿನ ಶೇ.9-ಶೇ.12ರಿಂದ ಶೇ.15ಕ್ಕೆ ಹೆಚ್ಚಿಸಿದ್ದು,ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.
ರಾಜ್ಯಗಳಿಗೆ ಲಭ್ಯವಿರುವ ಸಂಪನ್ಮೂಲಗಳಲ್ಲಿ ಬದಲಾವಣೆಯು ಖರ್ಚು ಆದ್ಯತೆಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು.
ರಾಜಕೀಯ ಲಾಭಕ್ಕಾಗಿ ರಾಜ್ಯಗಳಿಂದ ನಗದು ವಿತರಣೆ,ಸಾಲ ಮನ್ನಾಗಳು ಮತ್ತು ಇತರ ಉಚಿತ ಕೊಡುಗೆಗಳನ್ನು ನಿರುತ್ತೇಜಿಸಲು ಮಾರ್ಗಗಳನ್ನೂ ಕೇಂದ್ರ ಸರಕಾರವು ಸೂಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳ ತೆರಿಗೆ ಆದಾಯದಲ್ಲಿ ಕೊರತೆಯನ್ನು ಸರಿದೂಗಿಸಲು ಕೇಂದ್ರದ ಅನುದಾನಗಳನ್ನು ಕೆಲವು ಷರತ್ತುಗಳೊಂದಿಗೆ ತಳುಕು ಹಾಕುವುದು ಇಂತಹ ಒಂದು ಮಾರ್ಗವಾಗಬಹುದು ಮತ್ತು ಷರತ್ತುಗಳನ್ನು ಪೂರೈಸಿದ ಬಳಿಕವೇ ರಾಜ್ಯಗಳು ಇಂತಹ ಅನುದಾನಗಳಿಗೆ ಅರ್ಹವಾಗುತ್ತವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರವು ಉಚಿತ ಕೊಡುಗೆಗಳನ್ನು ನೀಡುತ್ತಿರುವ ರಾಜ್ಯಗಳಿಗೆ ಅನುದಾನಗಳನ್ನು ನಿರಾಕರಿಸಲಿದೆಯೇ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಕಳೆದ ಐದು ವರ್ಷಗಳಲ್ಲಿ ಈ ಆದಾಯ-ಕೊರತೆ ಅನುದಾನಗಳು 2021/22ರಲ್ಲಿದ್ದ 1.18 ಲ.ಕೋ.ರೂ.ಗಳಿಂದ 2025/26ನೇ ಸಾಲಿನ ಮುಂಗಡಪತ್ರದಲ್ಲಿ ಅಂದಾಜಿಸಲಾಗಿರುವ 137 ಶತಕೋಟಿ ರೂ.ಗೆ ಇಳಿಕೆಯಾಗಿವೆ.