ನೇಮಕಾತಿಗಳನ್ನು ಸುಗಮಗೊಳಿಸಲು ಎಸ್‌ಎಸ್‌ಸಿ, ರೈಲ್ವೆ ಮತ್ತು ಬ್ಯಾಂಕ್‌ಗಳಿಗೆ ಸಾಮಾನ್ಯ ಪರೀಕ್ಷೆ ನಡೆಸಲು ಕೇಂದ್ರದ ಚಿಂತನೆ: ವರದಿ
ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೇಮಕಾತಿಗಳಲ್ಲಿ ವಿಳಂಬಗಳ ಕುರಿತು ವಿವಾದಗಳು ಮತ್ತು ಪ್ರತಿಭಟನೆಗಳ ನಡುವೆ ಕೇಂದ್ರವು ಸಮಾನ ವಿದ್ಯಾರ್ಹತೆಗಳು ಅಗತ್ಯವಾಗಿರುವ ಗ್ರೂಪ್ ಬಿ(ನಾನ್ ಗೆಜೆಟೆಡ್) ಮತ್ತು ಗ್ರೂಪ್ ಸಿ ಸರಕಾರಿ ಹುದ್ದೆಗಳಿಗೆ ಸಾಮಾನ್ಯ ಪರೀಕ್ಷೆಯನ್ನು ನಡೆಸುವುದನ್ನು ಪರಿಶೀಲಿಸುತ್ತಿದೆ ಎಂದು theprint.in ವರದಿ ಮಾಡಿದೆ.
ಸರಕಾರದಲ್ಲಿನ ಮೂಲಗಳ ಪ್ರಕಾರ ಪ್ರಸ್ತುತ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ),ರೈಲ್ವೆ ನೇಮಕಾತಿ ಮಂಡಳಿ(ಆರ್‌ಆರ್‌ಬಿ) ಮತ್ತು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಐಬಿಪಿಎಸ್)ಯಂತಹ ಹಲವಾರು ಏಜೆನ್ಸಿಗಳು ವರ್ಷವಿಡೀ ಪರೀಕ್ಷೆಗಳನ್ನು ನಡೆಸುತ್ತವೆ. ಈ ನೇಮಕಾತಿ ಏಜೆನ್ಸಿಗಳಾದ್ಯಂತ ಒಂದೇ ರೀತಿಯ ವಿದ್ಯಾರ್ಹತೆಗಳನ್ನು ಹೊಂದಿರುವ ಹುದ್ದೆಗಳಿಗೆ ಸಂಘಟಿತ ನೇಮಕಾತಿ ಪ್ರಕ್ರಿಯೆ ಮೂಲಕ ಈ ಪರೀಕ್ಷೆಗಳನ್ನು ಸರಳೀಕರಿಸಲು ಸರಕಾರವು ಚಿಂತನೆ ನಡೆಸುತ್ತಿದೆ. ಈ ಪೈಕಿ ಹೆಚ್ಚಿನ ಪರೀಕ್ಷೆಗಳು ಒಂದೇ ರೀತಿಯ ಅರ್ಹತಾ ಮಾನದಂಡಗಳನ್ನು ಹೊಂದಿವೆ; 10ನೇ ತರಗತಿ ಅಥವಾ 12ನೇ ತರಗತಿಯಲ್ಲಿ ತೇರ್ಗಡೆ ಅಥವಾ ಪದವಿ.
ಈ ವರ್ಷದ ಜೂನ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಯು ಮಾಡಿರುವ ಈ ಶಿಫಾರಸನ್ನು ಸಂಪುಟ ಸಚಿವಾಲಯ ಮತ್ತು ಪ್ರಧಾನಿ ಕಚೇರಿ ಇನ್ನಷ್ಟೇ ಚರ್ಚಿಸಬೇಕಿವೆ.
‘ಪ್ರಸ್ತುತ, ಒಂದೇ ರೀತಿಯ ಶೈಕ್ಷಣಿಕ ಮಾನದಂಡಗಳನ್ನು ಹೊಂದಿರುವ ಹುದ್ದೆಗಳಿಗೆ ಹಲವಾರು ಸಂಸ್ಥೆಗಳು ಪರೀಕ್ಷೆ ನಡೆಸುತ್ತಿವೆ. ಹೀಗಾಗಿ ಒಂದೇ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಹಲವಾರು ಪರೀಕ್ಷೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಾರೆ ಮತ್ತು ವರ್ಷವಿಡೀ ನಿರಂತರವಾಗಿ ಪರೀಕ್ಷೆಗಳನ್ನು ಬರೆಯುತ್ತಿರುತ್ತಾರೆ. ಒಂದೇ ಪರೀಕ್ಷೆಯಿದ್ದರೆ ಅದರಲ್ಲಿಯೇ ಅಭ್ಯರ್ಥಿಗಳು ಗಳಿಸುವ ಶ್ರೇಣಿಗಳ ಆಧಾರದಲ್ಲಿ ವಿವಿಧ ಇಲಾಖೆಗಳಲ್ಲಿಯ ಹುದ್ದೆಗಳಿಗೆ ನಿಯೋಜಿಸಬಹುದು ’ಎಂದು ವಿಷಯವನ್ನು ಬಲ್ಲ ಅಧಿಕಾರಿಯೋರ್ವರು ಹೇಳಿದರು.
ಸರಕಾರದ ಅಭಿಪ್ರಾಯದಲ್ಲಿ ಅದೇ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಿಗೆ ಹಾಜರಾಗುವುದರಿಂದ ಪ್ರತಿ ಹುದ್ದೆಗೂ ಲಕ್ಷಗಟ್ಟಲೆ ಅಭ್ಯರ್ಥಿಗಳಾಗುತ್ತಾರೆ, ಇದು ಪರೀಕ್ಷಾ ಪ್ರಕ್ರಿಯೆ ಮತ್ತು ನೇಮಕಾತಿ ಸಮಯವನ್ನು ಹೆಚ್ಚಿಸುತ್ತದೆ. ಎಸ್‌ಎಸ್‌ಸಿ ನಡೆಸುವ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಎಲ್ಲ ಹಂತಗಳಲ್ಲಿ ಸರಾಸರಿ ನಾಲ್ಕು ಕೋಟಿ ಅಭ್ಯರ್ಥಿಗಳಿದ್ದರೆ,60 ಲಕ್ಷ ಅಭ್ಯರ್ಥಿಗಳು ಐಬಿಪಿಎಸ್ ಮತ್ತು ಸುಮಾರು 1.4 ಕೋಟಿ ಅಭ್ಯರ್ಥಿಗಳು ಆರ್‌ಆರ್‌ಬಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುತ್ತಾರೆ.
ಆದರೆ ವಿಲೀನವನ್ನು ಪ್ರಿಲಿಮನರಿ ಅಥವಾ ಮೇನ್ಸ್ ಪರೀಕ್ಷೆ ಮಟ್ಟದಲ್ಲಿ ಪರಿಗಣಿಸಲಾಗುತ್ತಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಅಲ್ಲದೆ, ವ್ಯವಸ್ಥೆಯಲ್ಲಿ ಹೆಚ್ಚಿನ ದಕ್ಷತೆಯನ್ನು ತರಲು ಐಎಎಸ್,ಐಸಿಎಎಸ್, ಐಡಿಎಎಸ್ ಮತ್ತು ಐಡಿಇಎಸ್‌ನಂತಹ ಕೆಲವು ನಾಗರಿಕ ಸೇವೆಗಳನ್ನು ವಿಲೀನಗೊಳಿಸುವ ಬಗ್ಗೆಯೂ ಡಿಒಪಿಟಿ ಪರಿಶೀಲಿಸುತ್ತಿದೆ.
ಡಿಒಪಿಟಿ ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) ಹಾಗೂ ಕೇಡರ್ ಮತ್ತು ಸೇವೆ ಹಂಚಿಕೆ ನಿಯಮಗಳ ಪುನರ್‌ಪರಿಶೀಲನೆಯ ಅಗತ್ಯವನ್ನೂ ಶಿಫಾರಸು ಮಾಡಿದೆ. ಯುಪಿಎಸ್‌ಸಿ ನಡೆಸುವ ಸಿಎಸ್‌ಇಯಿಂದ ಐಚ್ಛಿಕ ಪರೀಕ್ಷೆಯನ್ನು ಕೈಬಿಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಬಗ್ಗೆ 2017ರಲ್ಲಿ ಬಾಸ್ವಾನ್ ಸಮಿತಿಯೂ ಶಿಫಾರಸು ಮಾಡಿತ್ತು.
ದಕ್ಷತೆ ಆಧರಿತ ಬಡ್ತಿಗಳ ಬಗ್ಗೆಯೂ ಚರ್ಚೆ ನಡೆಯುತ್ತಿರಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಸೇವಾವಧಿಯನ್ನು ಆಧರಿಸಿ ಬಡ್ತಿಗಳನ್ನು ನೀಡಲಾಗುತ್ತಿದೆ. ಇಲಾಖೆಗಳಾದ್ಯಂತ ಲ್ಯಾಟರಲ್ ನಿಯೋಜನೆಗಳು ಮತ್ತು ಬಡ್ತಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಅನುಭವ ಮತ್ತು ಅವರು ಸರಕಾರದ ಸಮಗ್ರ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಪಡೆದಿರುವ ತರಬೇತಿಯನ್ನು ಆಧರಿಸಿರಬೇಕು ಎಂದೂ ಡಿಒಪಿಟಿ ಸೂಚಿಸಿದೆ.
ಡಿಒಪಿಟಿಯ ಇತರ ಶಿಫಾರಸುಗಳಲ್ಲಿ ಸರಕಾರಿ ಉದ್ಯೋಗಿಗಳ ನಡವಳಿಕೆ ನಿಯಮಗಳ ಪುನರ್‌ಪರಿಶೀಲನೆಯೂ ಸೇರಿದೆ.