ರಾಜ್ಯದ ಜನರ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತಿರುವ ಕೇಂದ್ರ ಸರಕಾರ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪ
ಮಮತಾ ಬ್ಯಾನರ್ಜಿ (Photo: PTI)
ಕೋಲ್ಕತ್ತ: ರಾಜ್ಯದ ಜನರು ಸಾಮಾಜಿಕ ಯೋಜನೆಗಳ ಪ್ರಯೋಜನ ಪಡೆಯುವುದನ್ನು ತಡೆಯಲು ಕೇಂದ್ರ ಸರಕಾರ ರಾಜ್ಯದ ಜನರ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತಿದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ರವಿವಾರ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಅವರು, “ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಯೋಜನೆಗಳ ಪ್ರಯೋಜನ ರಾಜ್ಯದ ಜನರು ಪಡೆಯದಂತೆ ತಡೆಯಲು ಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.
"ಎಚ್ಚರಿಕೆಯಿಂದಿರಿ, ಅವರು (ಕೇಂದ್ರ ಸರಕಾರ) ಆಧಾರ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ. ಬಂಗಾಳದ ಹಲವು ಜಿಲ್ಲೆಗಳಲ್ಲಿ ಹಲವಾರು ಆಧಾರ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅವರು (ಕೇಂದ್ರ ಸರಕಾರ) ಆಧಾರ್ ಕಾರ್ಡ್ಗಳನ್ನು ಡಿಲಿಂಕ್ ಮಾಡುತ್ತಿದ್ದಾರೆ. ಇದರಿಂದ ಜನರು ʼಲಕ್ಷ್ಮಿ ಭಂಡಾರ್ʼ ಮತ್ತು ಉಚಿತ ಪಡಿತರ ದಂತಹ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಆಧಾರ್ ಕಾರ್ಡ್ ಇಲ್ಲದಿದ್ದರೂ ಪ್ರತಿಯೊಬ್ಬ ಫಲಾನುಭವಿಯೂ ಯೋಜನೆಗಳ ಪ್ರಯೋನೆ ಪಡೆಯಲು ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.