ವಯನಾಡ್ ದುರಂತ ಸೇರಿದಂತೆ ವಿವಿಧ ಸಂದರ್ಭದಲ್ಲಿ ಮಾಡಿದ IAF ರಕ್ಷಣಾ ಕಾರ್ಯಚರಣೆಯ ವೆಚ್ಚ 132 ಕೋಟಿ ರೂ. ಪಾವತಿಸುವಂತೆ ಕೇರಳಕ್ಕೆ ಕೇಂದ್ರದ ಬೇಡಿಕೆ
ಹೈಕೋರ್ಟ್ಗೆ ಹೋಗಲು ಕೇರಳ ಸಜ್ಜು
PC : PTI
ತಿರುವನಂತಪುರ: ವಯನಾಡ್ ಭೂಕುಸಿತಗಳಿಂದಾಗಿ ಸಂತ್ರಸ್ತರ ಪುನರ್ವಸತಿಗಾಗಿ 2,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಕೇರಳ ಸರಕಾರದ ಪುನರಪಿ ವಿನಂತಿಗಳ ನಡುವೆ ಕೇಂದ್ರ ಸರಕಾರವು 2006ರಿಂದ ಭಾರತೀಯ ವಾಯುಪಡೆ(ಐಎಎಎಫ್)ಯು ನಡೆಸಿರುವ ವಿವಿಧ ಪರಿಹಾರ ಕಾರ್ಯಾಚರಣೆಗಳಿಗಾಗಿ 132.61 ಕೋ.ರೂ.ಗಳನ್ನು ಪಾವತಿಸುವಂತೆ ಸೂಚಿಸಿ ಅದಕ್ಕೆ ಪತ್ರವನ್ನು ರವಾನಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಐಎಎಫ್ ಮಾರ್ಷಲ್ 2019ರ ಪ್ರವಾಹ ಮತ್ತು ವಯನಾಡ ಭೂಕುಸಿತಗಳು ಸೇರಿದಂತೆ ಹಲವಾರು ವಿಪತ್ತುಗಳನ್ನು ಪಟ್ಟಿ ಮಾಡಿದ್ದಾರೆ. ಕೇಂದ್ರದ ಬೇಡಿಕೆಯ ವಿರುದ್ಧ ಉಚ್ಚ ನ್ಯಾಯಾಲಯದ ಮೊರೆ ಹೋಗಲು ಕೇರಳ ಸರಕಾರವು ನಿರ್ಧರಿಸಿದೆ.
ಐಎಎಫ್ ಕೈಗೊಂಡಿದ್ದ ವೈಮಾನಿಕ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಈ ಶುಲ್ಕವನ್ನು ವಿಧಿಸಲಾಗಿದ್ದು,ಅದನ್ನು ತಕ್ಷಣವೇ ಪಾವತಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ.
ಭೂಕುಸಿತ ಪೀಡಿತ ವಯನಾಡಿನಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳಿಗೆ ಐಎಎಫ್ ಆ.30ರಂದು 8,91,23,500 ರೂ.ಶುಲ್ಕವನ್ನು ವಿಧಿಸಿದೆ. ವಯನಾಡ ಭೂಕುಸಿತ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಒಟ್ಟು ಪಾವತಿಸಬೇಕಿರುವ ಮೊತ್ತ 69,65,46,417 ರೂ.ಗಳಾಗಿವೆ.
ವಯನಾಡ್ ಭೂಕುಸಿತಗಳ ಜೊತೆಗೆ ರಾಜ್ಯದಲ್ಲಿ 2019,ಆ.9 ಮತ್ತು 19ರ ನಡುವೆ ಭಾರೀ ವಿನಾಶವನ್ನುಂಟು ಮಾಡಿದ್ದ ಪ್ರವಾಹ ಸಂದರ್ಭದಲ್ಲಿ ನಡೆಸಲಾದ ರಕ್ಷಣ ಕಾರ್ಯಾಚರಣೆಗಳಿಗಾಗಿಯೂ ಐಎಎಫ್ 1,10,55,000 ರೂ.ಗಳ ಶುಲ್ಕವನ್ನು ವಿಧಿಸಿದೆ.
ಐಎಎಫ್ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಕೇರಳಕ್ಕೆ ಬಿಲ್ ಕಳುಹಿಸಿದ್ದು ಇದೇ ಮೊದಲ ಸಲವಲ್ಲ. 2020ರಲ್ಲಿ ಐಎಎಫ್ 2018ರ ಪ್ರವಾಹ ಸಂದರ್ಭದಲ್ಲಿ ನಡೆಸಿದ್ದ ರಕ್ಷಣಾ ಕಾರ್ಯಾಚರಣೆಗಳಿಗಾಗಿ 113.69 ಕೋಟಿ ರೂ.ಗಳನ್ನು ಪಾವತಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. 2018ರ ಪ್ರವಾಹದಲ್ಲಿ ಸಿಲುಕಿದ್ದ ಜನರ ಸ್ಥಳಾಂತರಕ್ಕೆ ಐಎಎಫ್ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ಬಳಸಿದ್ದಕ್ಕಾಗಿ 102.6 ಕೋಟಿ ರೂ.ಗಳನ್ನು ಪಾವತಿಸುವಂತೆ 2019ರಲ್ಲಿ ರಾಜ್ಯ ಸರಕಾರಕ್ಕೆ ಸೂಚಿಸಲಾಗಿತ್ತು.