ಚಂದ್ರಯಾನ-5 ಯೋಜನೆಗೆ ಕೇಂದ್ರ ಸರಕಾರದ ಅನುಮತಿ: ಇಸ್ರೊ ಮುಖ್ಯಸ್ಥ

ಇಸ್ರೊ ಮುಖ್ಯಸ್ಥ ವಿ. ನಾರಾಯಣನ್ (PTI)
ಚೆನ್ನೈ: ಚಂದ್ರನ ಕುರಿತು ಅಧ್ಯಯನ ನಡೆಸುವ ಉದ್ದೇಶ ಹೊಂದಿರುವ ಮಹತ್ವಾಕಾಂಕ್ಷಿ ಚಂದ್ರಯಾನ-5 ಯೋಜನೆಗೆ ಇತ್ತೀಚೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಇಸ್ರೊ ಮುಖ್ಯಸ್ಥ ವಿ. ನಾರಾಯಣನ್ ಹೇಳಿದರು.
ರವಿವಾರ ಬೆಂಗಳೂರಿನ ಇಸ್ರೊ ಮುಖ್ಯದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ತಮ್ಮ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 25 ಕೆಜಿ ತೂಕದ ಪ್ರಗ್ಯಾನ್ ರೋವರ್ ನನ್ನು ಕೊಂಡೊಯ್ದಿದ್ದ ಚಂದ್ರಯಾನ-3 ಯೋಜನೆಗೆ ಬದಲಾಗಿ, ಚಂದ್ರನ ಮೇಲ್ಮೈ ಕುರಿತು ಅಧ್ಯಯನ ನಡೆಸಲು ಈ ಬಾರಿಯ ಚಂದ್ರಯಾನ-5 ಯೋಜನೆಯು 250 ಕೆಜಿ ತೂಕದ ರೋವರ್ ಅನ್ನು ಕೊಂಡೊಯ್ಯಲಿದೆ ಎಂದು ತಿಳಿಸಿದರು.
ಈ ಚಂದ್ರಯಾನ ಯೋಜನೆಯು ಚಂದ್ರನ ಮೇಲ್ಮೈ ಕುರಿತ ಅಧ್ಯಯನವನ್ನು ಒಳಗೊಂಡಿದೆ. 2008ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಲಾಗಿದ್ದ ಚಂದ್ರಯಾನ-1 ಯೋಜನೆಯ ಸಂದರ್ಭದಲ್ಲಿ ಚಂದ್ರನಲ್ಲಿರುವ ರಾಸಾಯನಿಕ, ಖನಿಜಶಾಸ್ತ್ರೀಯ ಹಾಗೂ ಭೌಗೋಳಿಕ ಛಾಯಾ ನಕ್ಷೆಗಳನ್ನು ಭೂಮಿಗೆ ಹೊತ್ತು ತರಲಾಗಿತ್ತು. 2019ರಲ್ಲಿ ನಡೆದಿದ್ದ ಚಂದ್ರಯಾನ-2 ಯೋಜನೆಯು ಶೇ. 98ರಷ್ಟು ಯಶಸ್ವಿಯಾದರೂ, ಅಂತಿಮ ಘಟ್ಟದಲ್ಲಿ ಶೇ. 2ರಷ್ಟು ವಿಫಲಗೊಂಡಿತ್ತು ಎಂದು ಅವರು ಹೇಳಿದರು.
ಈಗಲೂ ಕೂಡಾ ಚಂದ್ರನ ಮೇಲಿರುವ ಚಂದ್ರಯಾನ-2 ಯೋಜನೆಯ ಕ್ಯಾಮೆರಾ ನೂರಾರು ಚಿತ್ರಗಳನ್ನು ರವಾನಿಸುತ್ತಿದೆ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ನಾರಾಯಣನ್ ತಿಳಿಸಿದರು.
ಗಗನಯಾನ ಸೇರಿದಂತೆ ಇಸ್ರೊ ಸಂಸ್ಥೆಯ ಭವಿಷ್ಯದ ವಿವಿಧ ಬಾಹ್ಯಾಕಾಶ ಯೋಜನೆಗಳಲ್ಲದೆ, ಭಾರತದ್ದೇ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’ವನ್ನು ಸ್ಥಾಪಿಸುವ ಯೋಜನೆಯೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಚಂದ್ರಯಾನ-2 ಯೋಜನೆಯ ಮರು ಭೇಟಿ ಯೋಜನೆಯಾಗಿದ್ದ ಚಂದ್ರಯಾನ-3ರಲ್ಲಿ ಕೊನೆ ಕ್ಷಣದವರೆಗಿನ ಸುರಕ್ಷಿತ ಭೂಸ್ಪರ್ಶ ಹಾಗೂ ಚಂದ್ರನ ಮೇಲ್ಮೈ ಮೇಲೆ ರೋವರ್ ತಿರುಗಾಟವನ್ನು ಪರೀಕ್ಷಿಸಲಾಗಿತ್ತು.
ಆಗಸ್ಟ್ 23, 2023ರಂದು ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದ ಇಸ್ರೊ, ಲ್ಯಾಂಡರ್ ವಿಕ್ರಂನನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಭೂಸ್ಪರ್ಶ ಮಾಡಿತ್ತು.
ಚಂದ್ರನ ಮೇಲೆ ಸಂಗ್ರಹಿಸಲಾಗಿರುವ ಮಾದರಿಗಳನ್ನು ಭೂಮಿಗೆ ಹೊತ್ತು ತರುವ ಗುರಿ ಹೊಂದಿರುವ ಚಂದ್ರಯಾನ-4 ಯೋಜನೆಯನ್ನು 2027ರಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ.