ʼಮಂಕಿಪಾಕ್ಸ್ʼ: ರಾಜ್ಯಗಳಿಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ (Credit: livemint.com)
ಹೊಸದಿಲ್ಲಿ: ಮಂಕಿಪಾಕ್ಸ್ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರವು, ದೇಶದಲ್ಲಿ ಈ ವೈರಸ್ನಿಂದ ಯಾವುದೇ ಪ್ರಕರಣ ಅಥವಾ ಸಾವಿನ ಅಪಾಯವನ್ನು ತಡೆಯಲು ಅಥವಾ ಕಡಿಮೆ ಮಾಡಲು ಎಲ್ಲ ಶಂಕಿತ ಎಂಪಾಕ್ಸ್ ರೋಗಿಗಳ ತಪಾಸಣೆ ಮತ್ತು ಪರೀಕ್ಷೆ ನಡೆಸುವಂತೆ, ದೃಢೀಕೃತ ರೋಗಿಗಳನ್ನು ಐಸೋಲೇಷನ್ನಲ್ಲಿ ಅಥವಾ ಪ್ರತ್ಯೇಕ ವಾರ್ಡ್ಗಳಲ್ಲಿ ಇರಿಸುವಂತೆ ಮತ್ತು ಅವರ ಸಂಪರ್ಕಗಳನ್ನು ಪತ್ತೆ ಹಚ್ಚುವಂತೆ ಶಿಫಾರಸು ಮಾಡಿದೆ.
ಆದರೂ, ಜನಸಾಮಾನ್ಯರಲ್ಲಿ ಅನಗತ್ಯ ಭೀತಿಯನ್ನು ತಡೆಯುವುದು ಬಹಳ ಮುಖ್ಯವಾಗಿದೆ ಎಂದು ಸರಕಾರವು ತಿಳಿಸಿದೆ.
ಐಸೋಲೇಷನ್ ಸೌಲಭ್ಯಗಳ ಸಿದ್ಧತೆಗಾಗಿ ಆಸ್ಪತ್ರೆಗಳನ್ನು ಗುರುತಿಸುವಂತೆ ಹಾಗೂ ಶಂಕಿತ ಮತ್ತು ದೃಢೀಕೃತ ಪ್ರಕರಣಗಳನ್ನು ಸ್ವೀಕರಿಸಲು ಸಜ್ಜಾಗಿರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಆಗ್ರಹಿಸಲಾಗಿದೆ. ಇದಕ್ಕಾಗಿ ಹೆಚ್ಚಿನ ಸಂಪನ್ಮೂಲಗಳು ಅಗತ್ಯವಾಗುತ್ತವೆ ಎಂದೂ ಅದು ತಿಳಿಸಿದೆ.
ಮಂಕಿಪಾಕ್ಸ್ ಕಾಯಿಲೆಯ ನಿರ್ವಹಣೆ, ಶಂಕಿತ ಪ್ರಕರಣಗಳು ಮತ್ತು ಸಂಪರ್ಕಗಳನ್ನು ಪತ್ತೆ ಹಚ್ಚಲು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅನುಸರಿಸಲಾಗಿದ್ದ ವಿವರವಾದ ಕಣ್ಗಾವಲು ಕಾರ್ಯತಂತ್ರದಂತಹ ವ್ಯವಸ್ಥೆಯ ಕುರಿತು ಮಾರ್ಗಸೂಚಿಗಳನ್ನು ಪ್ರಸಾರ ಮಾಡುವಂತೆಯೂ ಆರೋಗ್ಯ ಸಚಿವಾಲಯವು ಶಿಫಾರಸು ಮಾಡಿದೆ. ಪರೀಕ್ಷೆ,ಕ್ಲಿನಿಕಲ್ ನಿರ್ವಹಣೆ ಶಿಷ್ಟಾಚಾರ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸಕ್ರಿಯಗೊಳಿಸಲಾಗಿರುವ ಪ್ರಯೋಗಾಲಯಗಳ ಪಟ್ಟಿಯನ್ನೂ ಅದು ಒದಗಿಸಿದೆ.
ರಾಜ್ಯ ಹಾಗೂ ಜಿಲ್ಲಾಮಟ್ಟಗಳಲ್ಲಿ ಹಿರಿಯ ಅಧಿಕಾರಿಗಳಿಂದ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಆರೋಗ್ಯ ಸನ್ನದ್ಧತೆಯ ಪರಿಶೀಲನೆಗೂ ಕರೆ ನೀಡಿರುವ ಸಚಿವಾಲಯವು,ಇದು ಆರೋಗ್ಯ ಕಾರ್ಯಕರ್ತರಿಗೆ,ವಿಶೇಷವಾಗಿ ಚರ್ಮ/ಲೈಂಗಿಕವಾಗಿ ಹರಡುವ ಕಾಯಿಲೆಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ರೋಗಲಕ್ಷಣಗಳು,ಭೇದಾತ್ಮಕ ರೋಗನಿರ್ಣಯಗಳು ಮತ್ತು ಎಂಪಾಕ್ಸ್ ಪ್ರಕರಣ ಪತ್ತೆಯಾದ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದನ್ನು ಒಳಗೊಂಡಿರಬೇಕು ಎಂದು ತಿಳಿಸಿದೆ.
ಎಂಪಾಕ್ಸ್ ಮತ್ತು ಅದರ ಸಾಮಾನ್ಯ ಲಕ್ಷಣಗಳ ಕುರಿತು ಮಾಹಿತಿಯ ವ್ಯಾಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಪ್ಡೇಟ್ನ್ನು ಉಲ್ಲೇಖಿಸಿದೆ. ಮಂಕಿಪಾಕ್ಸ್ ರೋಗಿಗಳಲ್ಲಿ ಹೆಚ್ಚಿನವರು 18ರಿಂದ 44 ವರ್ಷ ವಯೋಮಾನದವರಾಗಿದ್ದು,ದದ್ದುಗಳು ಮತ್ತು ಜ್ವರ ಹೆಚ್ಚು ಸಾಮಾನ್ಯ ಲಕ್ಷಣಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಅಪ್ಡೇಟ್ನಲ್ಲಿ ತಿಳಿಸಿದೆ.
ಎಂಪಾಕ್ಸ್ನ್ನು ಅಂತರರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸಲಾಗಿದೆ.
ಭಾರತದಲ್ಲಿ ಈವರೆಗೆ ಯಾವುದೇ ದೃಢೀಕೃತ ಪ್ರಕರಣ ವರದಿಯಾಗಿಲ್ಲ.
ಎಂಪಾಕ್ಸ್ ದೃಢೀಕೃತ ಪ್ರಕರಣಗಳು ವರದಿಯಾಗಿರುವ ದೇಶದಿಂದ ರವಿವಾರ ಭಾರತಕ್ಕೆ ಮರಳಿದ ವ್ಯಕ್ತಿಯೋರ್ವನನ್ನು ಐಸೋಲೇಷನ್ನಲ್ಲಿ ಇರಿಸಲಾಗಿದ್ದು, ಆತನ ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗುತ್ತಿದೆ. ಆತನ ದೇಹಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2022 ಜನವರಿ ಮತ್ತು 2024 ಆಗಸ್ಟ್ ನಡುವೆ 120ಕ್ಕೂ ಹೆಚ್ಚಿನ ದೇಶಗಳಲ್ಲಿ ಎಂಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಪ್ರಯೋಗಾಲಯಗಳಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕವಾಗಿದ್ದು, ಸುಮಾರು 220 ಸಾವುಗಳು ಸಂಭವಿಸಿವೆ.