8 ಹೈಕೋರ್ಟ್ಗಳಿಗೆ 17 ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸರಕಾರ ಅಧಿಸೂಚನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಕೇಂದ್ರ ಸರಕಾರ ಬುಧವಾರ 8 ಹೈಕೋರ್ಟ್ಗಳಲ್ಲಿ 17 ನ್ಯಾಯಾಧೀಶರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ಮಣಿಪುರದ ಕಾರ್ಯನಿರತ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಹಲವು ಹೈಕೋರ್ಟ್ಗಳ 16 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದೆ.
ಹೈಕೋರ್ಟ್ ನ್ಯಾಯಾಧೀಶರ ನೇಮಕ ಹಾಗೂ ವರ್ಗಾವಣೆ ವಿಳಂಬದ ಕುರಿತಂತೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಇತ್ತೀಚೆಗಿನ ಸುತ್ತಿನ ವರ್ಗಾವಣೆಯಲ್ಲಿ ಮಣಿಪುರ ಹೈಕೋರ್ಟ್ ಕಾರ್ಯನಿರತ ಮುಖ್ಯ ನ್ಯಾಯಮೂರ್ತಿ ಎಂ.ವಿ. ಮುರಳೀಧರನ್ ಅವರನ್ನು ಕೋಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ ಮಾಡಿರುವುದು ಕೂಡ ಸೇರಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ‘‘ನ್ಯಾಯದ ಉತ್ತಮ ಆಡಳಿತ’’ಕ್ಕೆ ನ್ಯಾಯಮೂರ್ತಿ ಮುರಳೀಧರನ್ ಅವರನ್ನು ಕೋಲ್ಕತ್ತಾ ಹೈಕೋರ್ಟ್ಕ್ಕೆ ವರ್ಗಾವಣೆಗೆ ಶಿಫಾರಸು ಮಾಡಿತ್ತು.
8 ಹೈಕೋರ್ಟ್ಗಳಿಗೆ ನ್ಯಾಯಾಧೀಶರಾಗಿ ನಿಯೋಜಿತರಾದವರಲ್ಲಿ 11 ನ್ಯಾಯಾಂಗ ಅಧಿಕಾರಿಗಳು, 6 ನ್ಯಾಯವಾದಿಗಳು ಇದ್ದಾರೆ.
ಬುಧವಾರ ಸುಪ್ರೀಂ ಕೋರ್ಟ್ ಕೊಲಿಜಿಯಂ ವಿವಿಧ ಹೈಕೋರ್ಟ್ಗಳಿಗೆ 13 ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿತ್ತು.