ಗಡುವು ಮುಗಿದ ಬಳಿಕವೂ ಭಾರತದಲ್ಲಿ ಉಳಿದುಕೊಳ್ಳುವ ಪಾಕ್ ಪ್ರಜೆಗಳ ಗಡಿಪಾರಿಗೆ ರಾಜ್ಯಗಳಿಗೆ ಕೇಂದ್ರ ಆದೇಶ

ಅಮಿತ್ ಶಾ | PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ, ದೇಶ ತೊರೆಯಲು ನಿಗದಿಪಡಿಸಿದ ಗಡುವಿನ ಬಳಿಕ ಯಾವುದೇ ಪಾಕಿಸ್ತಾನಿ ಪ್ರಜೆ ಭಾರತದಲ್ಲಿ ಉಳಿದುಕೊಳ್ಳಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.
ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಭಯೋತ್ಪಾದಕ ದಾಳಿಗೆ ಬಲಿಯಾದ ಘಟನೆಯ ಬೆನ್ನಲ್ಲೇ ಭಾರತವು ಎಪ್ರಿಲ್ 27ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಪಡಿಸಲಾಗುವುದೆಂದು ಘೋಷಿಸಿತ್ತು. ಸಾಧ್ಯವಿದ್ದಷ್ಟು ಶೀಘ್ರವಾಗಿ ತಾಯ್ನಾಡಿಗೆ ವಾಪಾಸಾಗುವಂತೆ ಪಾಕಿಸ್ತಾನದಲ್ಲಿ ನೆಲೆರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿತ್ತು. ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಕರೆ ಮಾಡಿದ್ದು, ತಮ್ಮ ಪ್ರದೇಶಗಳಲ್ಲಿ ಉಳಿದುಕೊಂಡಿರುವ ಪಾಕ್ ಪ್ರಜೆಗಳನ್ನು ಗುರುತಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಲಾಗಿದೆ ಹಾಗೂ ಅವರ ಗಡಿಪಾರನ್ನು ಖಾತರಿಪಡಿಸಬೇಕೆಂದು ಮೂಲಗಳು ತಿಳಿಸಿವೆ.
ಆದರೆ ಈ ವೀಸಾ ರದ್ದತಿಯ ಆದೇಶವು ಪಾಕಿಸ್ತಾನದ ಹಿಂದೂ ಪೌರರಿಗೆ ನೀಡಲಾದ ದೀರ್ಘಾವಧಿಯ ವೀಸಾಗಳಿಗೆ ಅನ್ವಯವಾಗುವುದಿಲ್ಲ ಮತ್ತು ಅವು ಸಿಂಧುವಾಗಿರುತ್ತವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯಲ್ಲಿ ಗಡಿಯಾಚೆಗಿನ ನಂಟು ಇರುವ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನಿ ಪ್ರಜೆಗಳಿಗೆ ತಕ್ಷಣದಿಂದಲೇ ವೀಸಾ ಸೇವೆಗಳನ್ನು ಅಮಾನತುಗೊಳಿಸುವುದಾಗಿ ಗುರುವಾರ ಘೋಷಿಸಿತ್ತು.