ಸಿಎಎ ನಿಬಂಧನೆಯನ್ನು ಸರಳಗೊಳಿಸುವ ಬಗ್ಗೆ ಪರಿಶೀಲಿಸುತ್ತಿರುವ ಕೇಂದ್ರ ಸರಕಾರ: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಬಂಧನೆಗಳ ಪೈಕಿ ಒಂದನ್ನು ಸರಳಗೊಳಿಸಲು ಕ್ರಮಗಳನ್ನು ಕೇಂದ್ರ ಗೃಹ ಸಚಿವಾಲಯವು ಚರ್ಚಿಸುತ್ತಿದೆ. ಅರ್ಜಿದಾರರು ತಾವು ಬಾಂಗ್ಲಾದೇಶ,ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ಪ್ರಜೆಗಳು ಎನ್ನುವುದನ್ನು ಸಾಬೀತುಗೊಳಿಸಲು ಪುರಾವೆಯನ್ನು ಒದಗಿಸುವುದನ್ನು ಈ ನಿಬಂಧನೆಯು ಅಗತ್ಯವಾಗಿಸಿದೆ. ಸಂಭವನೀಯ ಫಲಾನುಭವಿಗಳು, ನಿರ್ದಿಷ್ಟವಾಗಿ ಬಾಂಗ್ಲಾದೇಶದಿಂದ ಯಾವುದೇ ದಾಖಲೆಗಳಿಲ್ಲದೆ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿರುವವರು ಮಾಡಿಕೊಂಡಿರುವ ಹಲವು ಮನವಿಗಳು ಮತ್ತು ಎತ್ತಿರುವ ಕಳವಳಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ ಎಂದು thehindu.com ವರದಿ ಮಾಡಿದೆ.
ಸಿಎಎ ಕಲಂ 6ಬಿ ಅಡಿ ಪೌರತ್ವವನ್ನು ಪಡೆಯಲು ಈ ಮೂರು ದೇಶಗಳಲ್ಲಿನ ಯಾವುದೇ ಸರಕಾರಿ ಸಂಸ್ಥೆ ನೀಡಿರುವ ಒಂಭತ್ತು ದಾಖಲೆಗಳಲ್ಲಿ ಯಾವುದೇ ಒಂದನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವ ಶೆಡ್ಯೂಲ್ 1ಎ ಅನ್ನು ತಿದ್ದುಪಡಿಗೊಳಿಸಲು ಚರ್ಚೆಗಳು ನಡೆಯುತ್ತಿವೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸಿಎಎ ಒಂದು ಅನುಕೂಲಕರ ಕಾನೂನು ಆಗಿದೆ ಮತ್ತು ಅರ್ಜಿಗಳನ್ನು ಸಂಸ್ಕರಿಸುವಾಗ ಅದರ ತಿರುಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅರ್ಜಿಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಇನ್ನೋರ್ವ ಅಧಿಕಾರಿ ಹೇಳಿದರು.
ದಾಖಲೆಯು ಪ್ರಸ್ತುತ ಲಭ್ಯವಿಲ್ಲದಿದ್ದರೆ ಅದನ್ನು ನಂತರ ಅಥವಾ ಸೂಕ್ತ ಸಮಯದಲ್ಲಿ ಸಲ್ಲಿಸಬಹುದು ಮತ್ತು ಅಧಿಕಾರಿಗಳು ಅದನ್ನು ‘ಸಂಸ್ಕರಣೆಗೆ ಬಾಕಿಯಿದೆ’ಎಂದು ದಾಖಲಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಈ ಬಗ್ಗೆ ಬಂಗಾಳಿ ಭಾಷೆಯಲ್ಲಿ ಮಾಹಿತಿ ಪತ್ರವೊಂದು ಪಶ್ಚಿಮ ಬಂಗಾಳದ ಮಥುವಾ ಪಂಗಡದ ಸದಸ್ಯರ ನಡುವೆ ಹರಿದಾಡುತ್ತಿದ್ದು, ‘ಶೆಡ್ಯೂಲ್ 1ಬಿ ಅಡಿ ದಾಖಲೆಗಳನ್ನು ನಂತರ ಉನ್ನತಾಧಿಕಾರ ಸಮಿತಿಗೆ ಸಲ್ಲಿಸಬಹುದು ಮತ್ತು ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸುವಾಗ ಅದು ಅಗತ್ಯವಿಲ್ಲ’ ಎಂದು ಅದರಲ್ಲಿ ತಿಳಿಸಲಾಗಿದೆ.
ಬಾಂಗ್ಲಾದೇಶದಿಂದ ವಲಸೆ ಬಂದಿರುವ ಹಿಂದುಗಳು ಗಣನೀಯ ಸಂಖ್ಯೆಯಲ್ಲಿರುವ ಪ.ಬಂಗಾಳದ ರಾಣಾಘಾಟ್ ಸಂಸದ ಜಗನ್ನಾಥ ಸರ್ಕಾರ್ ಅವರು,ಸಿಎಎ ನಿಯಮಗಳನ್ನು ಸರಳಗೊಳಿಸಬಹುದು ಮತ್ತು ಶೆಡ್ಯೂಲ್ 1ಎ ಅಡಿ ದಾಖಲೆಗಳ ಅನುಪಸ್ಥಿತಿಯಲ್ಲಿ ಅರ್ಜಿದಾರರು ಅವರ ಧರ್ಮವನ್ನು ಪ್ರಮಾಣೀಕರಿಸಿ ರಾಮಕೃಷ್ಣ ಮಿಶನ್,ಭಾರತೀಯ ಸೇವಾ ಸಂಘ ಅಥವಾ ಅನುಕೂಲ ಚಂದ್ರ ಆಶ್ರಮದಂತಹ ಧಾರ್ಮಿಕ ಸಂಸ್ಥೆ ನೀಡಿದ ಅರ್ಹತಾ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
2024ರ ಸಾರ್ವತ್ರಿಕ ಚುನಾವಣೆಗಳ ದಿನಾಂಕಗಳ ಪ್ರಕಟಣೆಗೆ ಮುನ್ನ ಮಾ.11ರಂದು ಅಧಿಸೂಚಿಸಲಾಗಿದ್ದ ಸಿಎಎ ನಿಯಮಗಳು ಪ.ಬಂಗಾಳದಲ್ಲಿ ಬಿಜೆಪಿಗೆ ನಿರೀಕ್ಷಿತ ಚುನಾವಣಾ ಬೆಂಬಲವನ್ನು ಒದಗಿಸಿರಲಿಲ್ಲ. ನಿಯಮಗಳಿಗೆ ಸಂಬಂಧಿಸಿದಂತೆ ಗೊಂದಲಗಳು ಮತ್ತು ಸಿಎಎ ಅಡಿ ಅರ್ಜಿ ಸಲ್ಲಿಸುವವರು ನಿರಾಶ್ರಿತರಾಗುತ್ತಾರೆ ಎಂಬ ಟಿಎಂಸಿಯ ಪ್ರಚಾರ ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿದ್ದವು ಎಂದು ಪಕ್ಷದೊಳಗಿನ ಮೂಲಗಳು ತಿಳಿಸಿದವು. ಬಾಂಗ್ಲಾದೇಶದಿಂದ ಬಂದಿರುವವರ ಬಳಿ ಈಗಾಗಲೇ ಮತದಾರರ ಗುರುತು ಚೀಟಿ ಮತ್ತು ಆಧಾರ್ ಕಾರ್ಡ್ ಇರುವುದರಿಂದ ಅವರು ಪೌರತ್ವಕ್ಕಾಗಿ ಮತ್ತೆ ಅರ್ಜಿಯನ್ನು ಸಲ್ಲಿಸಬೇಕಿಲ್ಲ ಎಂದು ಟಿಎಂಸಿ ಪ್ರಚಾರ ಮಾಡಿತ್ತು.
ಇದನ್ನು ಅಲ್ಲಗಳೆದ ಸರ್ಕಾರ್,ಮತದಾರ ಗುರುತು ಚೀಟಿ ಇದ್ದರೆ ಭಾರತೀಯ ಪ್ರಜೆ ಎಂಬ ಗ್ರಹಿಕೆ ಇದೆ, ಆದರೆ ಇದು ಸರಿಯಲ್ಲ. 1971ರ ವಿಮೋಚನಾ ಸಮರದ ಸಂದರ್ಭದಲ್ಲಿ ಮತ್ತು ನಂತರದ ವರ್ಷಗಳಲ್ಲೂ ಧಾರ್ಮಿಕ ಕಿರುಕುಳಕ್ಕೆ ಹೆದರಿ ಲಕ್ಷಾಂತರ ಜನರು ಬಾಂಗ್ಲಾದೇಶದಿಂದ ಇಲ್ಲಿಗೆ ಬಂದಿದ್ದಾರೆ. ಈ ದಾಖಲೆಗಳನ್ನು ಪಡೆಯಲು ಜನರು ರಾಜಕಾರಣಿಗಳಿಗೆ ಹಣ ನೀಡಿದ್ದರು,ಆದರೆ ಅವರು ಪೌರತ್ವ ಹೊಂದಿಲ್ಲವಾದ್ದರಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದಾಗ ಅವರಿಂದ 10 ಲ.ರೂ.ಗಳಿಂದ 20 ಲ.ರೂ.ಗಳವರೆಗೆ ಲಂಚವನ್ನು ಕೇಳಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಮಕ್ಕಳು ಭಾರತೀಯ ಪ್ರಜೆಗಳಾಗಿದ್ದಾರೆ,ಆದರೆ ಹೆತ್ತವರು ಅಲ್ಲ.ಅವರು ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುತ್ತಾರೆ,ಆದರೆ ಅವುಗಳನ್ನು ಪಡೆಯುವುದಿಲ್ಲ ಎಂದು ಹೇಳಿದರು.
ನಿಯಮಗಳನ್ನು ಸರಳಗೊಳಿಸಬೇಕು,ಆದರೆ ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಿರೋಧಿ ಶಕ್ತಿಗಳು ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳುವ ಮೂಲಕ ಲಾಭವೆತ್ತಲು ಪ್ರಯತ್ನಿಸಬಹುದು. ಅದನ್ನು ತಡೆಯಲು ಈ ಷರತ್ತನ್ನು(ಶೆಡ್ಯೂಲ್ 1ಎ) ತರಲಾಗಿತ್ತು. ಹಲವಾರು ಪರ್ಯಾಯಗಳಿವೆ,ಯಾವುದೇ ದಾಖಲೆ ಕಡ್ಡಾಯವಲ್ಲ. ನಿಮ್ಮ ಬಳಿ ದಾಖಲೆ ಇಲ್ಲದಿದ್ದರೆ ಅರ್ಹತಾ ಪ್ರಮಾಣಪತ್ರ ಸಾಕಾಗುತ್ತದೆ. ಅಧಿಕಾರಿಗಳು ವಿಚಾರಣೆಯನ್ನು ನಡೆಸುತ್ತಾರೆ,ಕಿರುಕುಳಕ್ಕೊಳಗಾದ ಹಿಂದುಗಳು ಪೌರತ್ವವನ್ನು ಪಡೆಯುತ್ತಾರೆ ಎಂದೂ ಸರ್ಕಾರ್ ತಿಳಿಸಿದರು.
ನಿಖರವಾದ ಸಂಖ್ಯೆಗಳು ತಿಳಿದಿಲ್ಲವಾದರೂ ಪ.ಬಂಗಾಳದಲ್ಲಿ ಸಿಎಎಯಿಂದ ಪ್ರಯೋಜನ ಪಡೆಯುವ ಮತುವಾ ಮತ್ತು ನಾಮಶೂದ್ರ ಸಮುದಾಯಗಳಿಗೆ ಸೇರಿದ ಸುಮಾರು 2.8 ಕೋ.ಜನರಿದ್ದಾರೆ.