ʼದುರುದ್ದೇಶಿತʼ ವರದಿಗಾರಿಕೆಗೆ ಒಸಿಆರ್ ಏಕೆ ವಾಪಸ್ ಪಡೆಯಬಾರದು: ಫ್ರೆಂಚ್ ಪತ್ರಕರ್ತೆಗೆ ಕೇಂದ್ರದ ನೋಟಿಸ್
ಹೊಸದಿಲ್ಲಿ: ಫ್ರೆಂಚ್ ಪತ್ರಕರ್ತೆ ವೆನೆಸ್ಸಾ ಡೌಗ್ನಾಕ್ ಎಂಬವರಿಗೆ ಕೇಂದ್ರ ಗೃಹ ಸಚಿವಾಲಯ ನೋಟಿಸ್ ಜಾರಿಗೊಳಿಸಿ ಆಕೆಯ ಒಸಿಆರ್ (ಓವರ್‌ಸೀಸ್ ಸಿಟಿಜನ್‌ಶಿಪ್ ಕಾರ್ಡ್ ಆಫ್ ಇಂಡಿಯಾ) ಅನ್ನು ಏಕೆ ವಾಪಸ್ ಪಡೆಯಬಾರದು ಎಂದು ಕೇಳಿದೆ. ಆಕೆಗೆ “ದುರುದ್ದೇಶಿತ” ವರದಿಗಾರಿಕೆಯು ದೇಶದ ಕುರಿತು ತಾರತಮ್ಯಕಾರಿ ಋಣಾತ್ಮಕ ಅಭಿಪ್ರಾಯ” ಮೂಡಿಸಿದೆ ಎಂದು ಸಚಿವಾಲಯ ಆರೋಪಿಸಿದೆ.
ಭಾರತೀಯ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಕಳೆದ 22 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ವೆನೆಸ್ಸಾ ಅವರಿಗೆ ನೋಟಿಸಿಗೆ ಉತ್ತರಿಸಲು ಫೆಬ್ರವರಿ 2ರ ತನಕ, ಅಂದರೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ನೋಟಿಸ್ ಅನ್ನು ಜನವರಿ 18ರಂದು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿದೇಶಿಗರ ನೋಂದಣಿ ಕಚೇರಿ ನೀಡಿತ್ತು.
“ಆಕೆಯ ವರದಿಗಾರಿಕೆ ಟೀಕಾತ್ಮಕವಾಗಿದೆ ಹಾಗೂ ದೇಶದ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡಿಸುತ್ತದೆ,” ಎಂದು ನೋಟಿಸಿನಲ್ಲಿ ಆರೋಪಿಸಲಾಗಿದೆಯಲ್ಲದೆ “ಆಕೆಯ ಕೆಲಸ ಸಮಾಜದ ಕೆಲ ವರ್ಗಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಬಹುದು.” ಎಂದೂ ಹೇಳಿದೆ.
ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ವೆನೆಸ್ಸಾ “ಭಾರತ ನನ್ನ ಮನೆ, ಈ ದೇಶವನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಆರೋಪಿಸಿದಂತೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಾನು ಏನೂ ಮಾಡಿಲ್ಲ,” ಎಂದು ಹೇಳಿದ್ದಾರೆ.