30,000 ಕೋಟಿ ರೂ.ಗಳ ಸರಕಾರಿ ಭದ್ರತೆಗಳ ಹರಾಜಿಗೆ ಮುಂದಾದ ಕೇಂದ್ರ
ಸಾಂದರ್ಭಿಕ ಚಿತ್ರ (Image by jcomp on Freepik)
ಹೊಸದಿಲ್ಲಿ: ವಿತ್ತೀಯ ಅಗತ್ಯಗಳನ್ನು ನಿರ್ವಹಿಸುವ ಕ್ರಮವಾಗಿ 30,000 ಕೋಟಿ ರೂ.ಗಳ ಸಂಚಿತ ಮೊತ್ತವನ್ನು ಸಂಗ್ರಹಿಸುವ ಗುರಿಯೊಂದಿಗೆ ಮೂರು ಸರಕಾರಿ ಭದ್ರತೆಗಳನ್ನು ಹರಾಜು (ಮರು ವಿತರಣೆ) ಮಾಡುವುದಾಗಿ ಕೇಂದ್ರವು ಪ್ರಕಟಿಸಿದೆ.
ವಿತ್ತ ಸಚಿವಾಲಯವು ಹೊರಡಿಸಿರುವ ಹೇಳಿಕೆಯಂತೆ ಹರಾಜಾಗಲಿರುವ ಭದ್ರತೆಗಳು ‘ಸರಕಾರಿ ಭದ್ರತೆ 2028ರ ಶೇ.7.37 (ಅಧಿಸೂಚಿತ ಮೊತ್ತ 7,000 ಕೋಟಿ ರೂ.)’,‘ಸರಕಾರಿ ಭದ್ರತೆ 2033ರ ಶೇ.7.18 (ಅಧಿಸೂಚಿತ ಮೊತ್ತ 13,000 ಕೋ.ರೂ.)’ ಮತ್ತು ‘ಸರಕಾರಿ ಭದ್ರತೆ 2053ರ ಶೇ.7.3 (ಅಧಿಸೂಚಿತ ಮೊತ್ತ 10,000 ಕೋ.ರೂ.)’ ಇವುಗಳನ್ನು ಒಳಗೊಂಡಿವೆ.
ಆರ್ಬಿಐ ಡಿ.1ರಂದು ತನ್ನ ಮುಂಬೈ ಕಚೇರಿಯಲ್ಲಿ ಈ ಭದ್ರತೆಗಳ ಹರಾಜು ನಡೆಸಲಿದೆ. ಮೇಲ್ಕಾಣಿಸಿದ ಪ್ರತಿ ಭದ್ರತೆಯಲ್ಲಿ 2,000 ಕೋ.ರೂ.ವರೆಗೆ ಹೆಚ್ಚುವರಿ ಚಂದಾಗಳನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಸರಕಾರವು ಕಾಯ್ದಿರಿಸಿದೆ.
ಬಿಡ್ಡಿಂಗ್ ಪ್ರಕ್ರಿಯೆಯು ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ;ಹೀಗೆ ಎರಡೂ ಬಿಡ್ಗಳನ್ನು ಒಳಗೊಂಡಿರಲಿದೆ ಮತ್ತು ಬಿಡ್ಗಳನ್ನು ಆರ್ಬಿಐನ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ (ಇ-ಕುಬೇರ) ಮೂಲಕ ಸಲ್ಲಿಸಬೇಕಾಗುತ್ತದೆ ಎಂದು ಹೇಳಿಕೆಯು ತಿಳಿಸಿದೆ.