ಎಸ್ಸಿ ವಿದ್ಯಾರ್ಥಿವೇತನ ಯೋಜನೆಯಡಿ ಪಂಜಾಬಿಗೆ 930 ಕೋಟಿ ರೂ.ಗಳನ್ನು ತಡೆಹಿಡಿದ ಕೇಂದ್ರ
ಸಾಂದರ್ಭಿಕ ಚಿತ್ರ
ಚಂಡಿಗಡ: 2017ರಿಂದ 2020ರವರೆಗೆ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ಪರಿಶಿಷ್ಟ ಜಾತಿ (ಎಸ್ಸಿ) ವಿದ್ಯಾರ್ಥಿಗಳಿಗೆ ಸುಮಾರು 250 ಕೋಟಿ ರೂ.ಗಳ ಬಿಡುಗಡೆಯನ್ನು ಪಂಜಾಬ್ ವಿಳಂಬಿಸಿದ್ದು ಕೇಂದ್ರವು ಎಸ್ಸಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ಅದಕ್ಕೆ 930 ಕೋಟಿ ರೂ.ಗಳನ್ನು ತಡೆಹಿಡಿಯಲು ಕಾರಣವಾಗಿದೆ ಎಂದು tribuneindia.com ವರದಿ ಮಾಡಿದೆ.
ಪಂಜಾಬ್ ತನ್ನ ಶೇ.40ರಷ್ಟು ಪಾಲನ್ನು ಪಾವತಿಸಿದ ಬಳಿಕವೇ ಕೇಂದ್ರವು ತನ್ನ ಶೇ.60ರಷ್ಟು ಪಾಲನ್ನು ಬಿಡುಗಡೆ ಮಾಡುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸ್ಪಷ್ಟಪಡಿಸಿದೆ.
ಪಂಜಾಬ್ ಈವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ 366 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ, ಆದರೆ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 250 ಕೋಟಿ ರೂ.ಈಗಲೂ ಬಾಕಿಯಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ವಿದ್ಯಾರ್ಥಿವೇತನವು 120 ಕೋಟಿ ರೂ.ಶಿಕ್ಷಣ ಶುಲ್ಕ ಮತ್ತು 140 ಕೋಟಿ ರೂ.ನಿರ್ವಹಣಾ ವೆಚ್ಚವನ್ನು ಒಳಗೊಂಡಿದೆ.
ಈ ವಿಷಯವನ್ನು ಹಣಕಾಸು ಇಲಾಖೆಯೊಂದಿಗೆ ಕೈಗೆತ್ತಿಕೊಳ್ಳಲಾಗಿದ್ದು, ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಬಾಕಿಗಳನ್ನು ಶೀಘ್ರವೇ ಪಾವತಿಸಲಾಗುವುದು ಎಂದು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ ಡಾ.ಬಲ್ಜಿತ್ ಕೌರ್ ತಿಳಿಸಿದ್ದಾರೆ.
ಪಂಜಾಬಿನಲ್ಲಿ ಕ್ಯಾ.ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 12ನೇ ಪಂಚವಾರ್ಷಿಕ ಯೋಜನೆಯಡಿ ವಿದ್ಯಾರ್ಥಿವೇತನ ಯೋಜನೆಯು 2016-17ರಲ್ಲಿ ಅಂತ್ಯಗೊಂಡಿದ್ದರಿಂದ ಕೇಂದ್ರವು ತನ್ನ ಪಾಲನ್ನು ಬಿಡುಗಡೆ ಮಾಡಿರಲಿಲ್ಲ. ರಾಜ್ಯ ಸರಕಾರವು ರಾಜಕೀಯ ಲಾಭಕ್ಕಾಗಿ ಯೋಜನೆಯನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದ ಕೇಂದ್ರವು 2017 ಮತ್ತು 2020ರ ನಡುವೆ ಯಾವುದೇ ಹಣವನ್ನು ಒದಗಿಸಿರಲಿಲ್ಲ.
ಈ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳು ಪದವಿಯನ್ನು ಪಡೆದು ಹೊರಬಿದ್ದರೂ ಕಾಲೇಜುಗಳಿಗೆ ಪರಿಹಾರ ಪಾವತಿಯಾಗಿರಲಿಲ್ಲ. ಪರಿಣಾಮವಾಗಿ 2017 ಮತ್ತು 2022ರ ನಡುವೆ ಎಸ್ಸಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ತೀವ್ರಕುಸಿತ ಕಂಡು ಬಂದಿತ್ತು. ಕೇಂದ್ರವು 2021ರಲ್ಲಿ 60:40 ಅನುಪಾತದಲ್ಲಿ ಯೋಜನೆಯನ್ನು ಮತ್ತೆ ಆರಂಭಿಸಿತ್ತು