ಆಗಸ್ಟ್ 30ರಂದು ಚಂಪೈ ಸೊರೇನ್ ಬಿಜೆಪಿಗೆ: ಅಸ್ಸಾಂ ಸಿಎಂ
PC: x.com/himantabiswa
ಹೊಸದಿಲ್ಲಿ: ಒಂದು ತಿಂಗಳ ಹಿಂದಿನವರೆಗೂ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದು, ಹೇಮಂತ್ ಸೊರೇನ್ ಅವರ ಪುನರಾಗಮನಕ್ಕೆ ದಾರಿ ಮಾರಿ ಮಾಡಿಕೊಟ್ಟು ಪಕ್ಷದ ಮೇಲೆ ಮುನಿಸಿಕೊಂಡಿರುವ ಹಿರಿಯ ಜೆಎಂಎಂ ಮುಖಂಡ ಚಂಪೈ ಸೊರೆನ್ ಶುಕ್ರವಾರ ಬಿಜೆಪಿ ಸೇರುವುದು ಖಚಿತವಾಗಿದೆ.
ಭೂ ಹಗರಣದಲ್ಲಿ ಜಾಮೀನು ಪಡೆದ ಬಳಿಕ ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿ ಗಾದಿ ಏರಿದ್ದು, ಅವರಿಗೆ ಸ್ಥಾನ ತೆರವು ಮಾಡಿದ ಚಂಪೈ ಸೊರೆನ್ ಬಿಜೆಪಿಗೆ ಹೋಗುವ ಬಗ್ಗೆ ವ್ಯಾಪಕ ವದಂತಿಗಳು ಇದ್ದವು. "ಜಾರ್ಖಂಡ್ ನ ಮಾಜಿ ಸಿಎಂ ಹಾಗೂ ದೇಶದ ಪ್ರಮುಖ ಆದಿವಾಸಿ ನಾಯಕ ಚಂಪೈ ಸೊರೇನ್ ಅವರು ಮಾನ್ಯ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ಆಗಸ್ಟ್ 30ರಂದು ರಾಂಚಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ" ಎಂದು ಅಸ್ಸಾಂ ಸಿಎಂ ಹಾಗೂ ಬಿಜೆಪಿಯ ಜಾರ್ಖಂಡ್ ಸಹ ಉಸ್ತುವಾರಿ ಹೊಂದಿರುವ ಹಿಮಾಂತ ಬಿಸ್ವ ಶರ್ಮಾ ಸೋಮವಾರ ತಡರಾತ್ರಿ ಎಕ್ಸ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಜೆಎಂಎಂ ನೇತೃತ್ವದ ಸರ್ಕಾರದಲ್ಲಿ ಇನ್ನೂ ಸಚಿವರಾಗಿರುವ ಚಂಪೈ, ತಮ್ಮ ಸಹೋದ್ಯೋಗಿ ಲೊಬಿನ್ ಹೆಂಬ್ರೋನ್ ಜತೆಗೆ ಪಕ್ಷ ತೊರೆಯಲಿದ್ದಾರೆ ಎಂದು ಮೂಲಗಳು ಹೇಳಿವೆ. ಬಿಜೆಪಿ ಸೋಮವಾರ ಸೊರೇನ್ ಅವರಿಗೆ ಅಧಿಕೃತ ಆಹ್ವಾನ ನೀಡಿತ್ತು. "ಚಂಪೈ ಸೊರೇನ್ ಅವರು ಬಿಜೆಪಿಗೆ ಬರಬೇಕು ಎಂಬ ಪ್ರಾಮಾಣಿಕ ಬಯಕೆ ನನ್ನದು. ಅವರು ದೊಡ್ಡ ನಾಯಕರಾಗಿದ್ದು, ಬಿಜೆಪಿ ಸೇರುವುದನ್ನು ಪರಿಗಣಿಸಬೇಕು. ನಾನು ಹಲವು ಬಾರಿ ಅವರೊಂದಿಗೆ ಮಾತನಾಡಿದ್ದೇನೆ. ಆದರೆ ಇದುವರೆಗೂ ರಾಜಕೀಯ ಚರ್ಚೆಗಳು ನಡೆದಿಲ್ಲ" ಎಂದು ಶರ್ಮಾ ಈ ಒಪ್ಪಂದಕ್ಕೆ ಮುನ್ನ ವಿವರಿಸಿದ್ದರು.