ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೇನ್ ಬಿಜೆಪಿ ಸೇರ್ಪಡೆ?: ದಿಲ್ಲಿಗೆ ದೌಡಾಯಿಸಿದ JMM ಹಿರಿಯ ನಾಯಕ
ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತ ಪಕ್ಷಕ್ಕೆ ಆಘಾತ?
ಚಂಪೈ ಸೊರೇನ್ (Photo: ANI)
ಹೊಸದಿಲ್ಲಿ: ಬಿಜೆಪಿಗೆ ಪಕ್ಷಾಂತರ ಮಾಡಲು ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾದ (JMM) ಹಿರಿಯ ನಾಯಕ ಚಂಪೈ ಸೊರೇನ್ ದಿಲ್ಲಿಗೆ ತೆರಳಿದ್ದು, ಈ ವರ್ಷದ ಆರಂಭದಲ್ಲಿ ನಡೆಯಲಿರುವ ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಅವರು ಬಿಜೆಪಿಗೆ ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಮೂಲಗಳ ಪ್ರಕಾರ, ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಚಂಪೈ ಸೊರೇನ್ ನಿನ್ನೆ ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಂಪೈ ಸೊರೇನ್, "ನಾನು ವ್ಯಯಕ್ತಿಕ ಕಾರಣಗಳಿಗಾಗಿ ದಿಲ್ಲಿಗೆ ಆಗಮಿಸಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದ ನಂತರ, ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಚಂಪೈ ಸೊರೇನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ, ಜುಲೈ ತಿಂಗಳಲ್ಲಿ ಅವರು ಮತ್ತೆ ಹೇಮಂತ್ ಸೊರೇನ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಇದರ ಬೆನ್ನಿಗೇ, ಚಂಪೈ ಸೊರೇನ್ ಅವರು ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.
ಚಂಪೈ ಸೊರೇನ್ ಕೇವಲ 5 ತಿಂಗಳ ಅವಧಿಗೆ ಮಾತ್ರ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು.