ಚಂದನ್ ಗುಪ್ತಾ ಹತ್ಯೆ ಪ್ರಕರಣ: 28 ಮಂದಿಗೆ ಜೀವಾವಧಿ ಶಿಕ್ಷೆ
ಚಂದನ್ ಗುಪ್ತಾ x.com/legaltaraju
ಲಕ್ನೋ: ತಿರಂಗಾ ಯಾತ್ರೆ ಸಂದರ್ಭದಲ್ಲಿ 2018ರ ಜನವರಿ 26ರಂದು ಕಾಸ್ ಗಂಜ್ ನಲ್ಲಿ ನಡೆದ ಹಿಂಸಾಚಾರದಲ್ಲಿ 22 ವರ್ಷ ವಯಸ್ಸಿನ ಚಂದನ್ ಗುಪ್ತಾ ಹತ್ಯೆಗೆ ಸಂಬಂಧಿಸಿದಂತೆ ಲಕ್ನೋ ಎನ್ಐಎ ನ್ಯಾಯಾಲಯ 28 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿವೇಕಾನಂದ ಶರಣ್ ತ್ರಿಪಾಠಿಯವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಹತ್ಯೆ), 307 (ಹತ್ಯೆ ಪ್ರಯತ್ನ), 147 (ದೊಂಬಿ) ಮತ್ತು 149 (ಕಾನೂನುಬಾಹಿರ ಸಭೆ) ಮತ್ತು ರಾಷ್ಟ್ರೀಯ ಗೌರವ ಕಾಯ್ದೆ ಮತ್ತು ಸಿಎಲ್ಎ ಕಾಯ್ದೆಗೆ ಅವಮಾನ ಮಾಡಿದ ಆರೋಪದಲ್ಲಿ ಶಿಕ್ಷೆ ವಿಧಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಏಳು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗಳಲ್ಲಿ ವಾಸಿಂ, ನಸೀಮ್, ಝಹೀದ್ ಅಲಿಯಾಸ್ ಜಗ್ಗಾ, ಬಬ್ಲೂ, ಅಕ್ರಮ್, ಮೊಹ್ಸಿನ್, ರಹಾತ್ ಸಲ್ಮನ್ ಮತ್ತಿತರರು ಸೇರಿದ್ದಾರೆ. ಎಲ್ಲರನ್ನೂ ಬಂಧಿಸಲಾಗಿದೆ. ಮುನಜೀರ್ ರಫಿ ಎಂಬ ಆರೋಪಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದು, ಸಲೀಮ್ ಎಂಬಾತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ಈತ ವ್ಹೀಲ್ ಚೇರ್ ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದ.
ಅಭಿಯೋಜಕರು 18 ಮಂದಿ ಸಾಕ್ಷಿಗಳನ್ನು ಹಾಜರುಪಡಿಸಿದ್ದು, ಪ್ರತಿವಾದಿಗಳು 23 ಸಾಕ್ಷಿಗಳನ್ನು ಹಾಜರುಪಡಿಸಿದ್ದರು. 2018ರ ಜುಲೈನಲ್ಲಿ ಕಾಸ್ ಗಂಜ್ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಎನ್ಐಎ ನ್ಯಾಯಾಲಯಕ್ಕೆ ವರ್ಗಾಯಿಸಿ, 2019ರ ಸೆಪ್ಟೆಂಬರ್ 2ರಂದು ಆರೋಪಗಳನ್ನು ಅಂತಿಮಪಡಿಸಲಾಗಿತ್ತು ಎಂದು ಅಪರಾಧ ವಿಭಾಗದ ಹೆಚ್ಚುವರಿ ಡಿಜಿಸಿ ಎಂ.ಕೆ.ಸಿಂಗ್ ಹೇಳಿದ್ದಾರೆ.