ಚಂಡೀಗಢ ನಗರಸಭೆಯ ಮೇಯರ್ ಚುನಾವಣೆ ಮುಂದೂಡಿಕೆ ; ಬಿಜೆಪಿಗೆ ‘ಡೆಮಾಕ್ರಸಿ ಫೋಬಿಯ’ ಎಂದ ಆಪ್
ರಾಘವ್ ಚಡ್ಡಾ | Photo: Aam Aadmi Party/ X
ಚಂಡೀಗಢ: ಚುನಾವಣಾಧಿಕಾರಿಗೆ ‘ಅಸೌಖ್ಯ’ ಕಾಡಿದ ಹಿನ್ನೆಲೆಯಲ್ಲಿ ಚಂಡೀಗಢದ ಮೇಯರ್ ಚುನಾವಣೆಯನ್ನು ಮುಂದೂಡಲಾಗಿದೆ. ಚುನಾವಣೆಯು ಗುರುವಾರ ನಡೆಯಬೇಕಾಗಿತ್ತು.
ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್) ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಚುನಾವಣೆ ಮುಂದೂಡಿದ ಸುದ್ದಿ ಪ್ರಕಟಗೊಳ್ಳುತ್ತಲೇ, ಈ ಪಕ್ಷಗಳು ಮುನಿಸಿಪಲ್ ಕಾರ್ಪೊರೇಶನ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದವು.
‘‘ತಾನು ಸೋಲುತ್ತೇನೆ ಎನ್ನುವುದು ಭಾರತೀಯ ಜನತಾ ಪಕ್ಷಕ್ಕೆ ಅರಿವಾಗಿದೆ’’ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಪವನ್ ಕುಮಾರ್ ಬನ್ಸಲ್ ಹೇಳಿದರು. ‘‘ಅದಕ್ಕಾಗಿ ಅವರು ಈ ನಾಟಕ ಮಾಡಿದ್ದಾರೆ. ಅವರು ನ್ಯಾಯೋಚಿತವಾಗಿದ್ದರೆ, ಕಾಯಿಲೆ ಬಿದ್ದಿದ್ದಾರೆ ಎನ್ನಲಾಗಿರುವ ಚುನಾವಣಾಧಿಕಾರಿಯ ಸ್ಥಾನದಲ್ಲಿ ತಕ್ಷಣ ಇನ್ನೋರ್ವ ಚುನಾವಣಾಧಿಕಾರಿಯನ್ನು ನೇಮಿಸುತ್ತಿದ್ದರು’’ ಎಂದು ಅವರು ಹೇಳಿದರು.
ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗುವುದಾಗಿ ಆಪ್ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ. ‘‘ಈ ಸಣ್ಣ ಚುನಾವಣೆಯಲ್ಲಿ ನಮ್ಮ ಮೈತ್ರಿಗೆ ಬಿಜೆಪಿ ಇಷ್ಟೊಂದು ಹೆದರಿಕೊಂಡರೆ, ರಾಷ್ಟ್ರೀಯ ಮಟ್ಟದಲ್ಲಿರುವ ಮೈತ್ರಿಕೂಟಕ್ಕೆ ಅದು ಇನ್ನೆಷ್ಟು ಹೆದರಿರಬೇಕು’’ ಎಂದು ಅವರು ನುಡಿದರು.
‘‘ಬಿಜೆಪಿಗೆ ಪ್ರಜಾಪ್ರಭುತ್ವದ ಭಯ (ಡೆಮಾಕ್ರಸಿ ಫೋಬಿಯ) ಆರಂಭವಾಗಿದೆ’’ ಎಂಬುದಾಗಿ ಚಡ್ಡಾ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ‘‘ಡೆಮಾಕ್ರಸಿ ಫೋಬಿಯ ಎಂದರೆ, ಪ್ರಜಾಪ್ರಭುತ್ವ ಹಾಗೂ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳ ಕುರಿತ ಭಯ’’ ಎಂಬ ವಿವರಣೆಯನ್ನೂ ಅವರು ನೀಡಿದ್ದಾರೆ.
ಚಂಡೀಗಢ ನಗರಸಭೆಯಲ್ಲಿ ಬಿಜೆಪಿ 14 ಸದಸ್ಯರನ್ನು ಹೊಂದಿದೆ. ಆಪ್ನ 13 ಮತ್ತು ಕಾಂಗ್ರೆಸ್ನ 7 ಕೌನ್ಸಿಲರ್ಗಳಿದ್ದಾರೆ. ಶಿರೋಮಣಿ ಅಕಾಲಿ ದಳವು ಓರ್ವ ಸದಸ್ಯನನ್ನು ಹೊಂದಿದೆ. ಸರಳ ಬಹುಮತಕ್ಕೆ 18 ಮತಗಳ ಅಗತ್ಯವಿದೆ.