ಚಂಡೀಗಢ ಮೇಯರ್ ಚುನಾವಣೆ ವಿವಾದ: ಮತಪತ್ರ ತಿರುಚಿದ್ದನ್ನು ಒಪ್ಪಿಕೊಂಡ ಚುನಾವಣಾಧಿಕಾರಿ
►ಮತಪತ್ರಗಳನ್ನು ನಾಳೆ ಹಾಜರುಪಡಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ ►ರಿಟರ್ನಿಂಗ್ ಅಧಿಕಾರಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದ ನ್ಯಾಯಾಲಯ
ಹೊಸದಿಲ್ಲಿ: ವಿವಾದಾತ್ಮಕ ಚಂಡೀಗಢ ಮೇಯರ್ ಚುನಾವಣೆ ಕುರಿತಂತೆ ಇಂದು ಸುಪ್ರೀಂ ಕೋರ್ಟಿಗೆ ಹಾಜರಾದ ಚುನಾವಣಾಧಿಕಾರಿ ಅನಿಲ್ ಮಸೀಹ್, ತಾನು ಮತಪತ್ರಗಳನ್ನು ತಿರುಚಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಮರುಚುನಾವಣೆ ನಡೆಸುವ ಬದಲು ರಿಟರ್ನಿಂಗ್ ಅಧಿಕಾರಿ ಮಾಡಿದ ಗುರುತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮತಪತ್ರಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಾಳೆ ಮತಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆಯೂ ಕೋರ್ಟ್ ಆದೇಶಿಸಿದೆ. ನಡೆಯುತ್ತಿರುವ ಕುದುರೆ ವ್ಯಾಪಾರದ ಕುರಿತೂ ನ್ಯಾಯಾಲಯ ತನ್ನ ಕಳವಳ ವ್ಯಕ್ತಪಡಿಸಿದೆ ಹಾಗೂ ಲಭ್ಯ ಮತಪತ್ರಗಳ ಕೂಲಂಕಷ ಪರಿಶೀಲನೆ ನಡೆಸಬೇಕೆಂದು ಹೇಳಿದೆ.
ಭಾರೀ ವಿವಾದ ಸೃಷ್ಟಿಸಿದ್ದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಂಟು ಮತಪತ್ರಗಳನ್ನು ಅಧಿಕಾರಿ ಅಸಿಂಧು ಎಂದು ಘೋಷಿಸಿದ ಪರಿಣಾಮ ಸ್ಪಷ್ಟ ಬಹುಮತವಿರುವ ಹೊರತಾಗಿಯೂ ಆಪ್ ಅಭ್ಯರ್ಥಿ ಸೋಲುಂಡು ಬಿಜೆಪಿ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗಿತ್ತು.
ರಿಟರ್ನಿಂಗ್ ಅಧಿಕಾರಿಯ ಕ್ರಮ ಪ್ರಜಾಪ್ರಭುತ್ವದ ಹತ್ಯೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಟೀಕಿಸಿತ್ತು.