ಭ್ರಷ್ಟಾಚಾರ ಆರೋಪದಲ್ಲಿ ಬಂಧಿತರಾಗಿದ್ದ ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ
PHOTO : PTI
ಹೈದರಾಬಾದ್: 371 ಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣವು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವು ಅಧಿಕಾರದಲ್ಲಿದ್ದಾಗ ಅಸ್ತಿತ್ವಕ್ಕೆ ಬಂದಿದ್ದ ಆಂಧ್ರಪ್ರದೇಶ ರಾಜ್ಯ ಕೌಶಲಾಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದೆ.
ನಾಯ್ಡು ಅವರನ್ನು ರಾಜಮುಂಡ್ರಿ ಜೈಲಿಗೆ ಕರೆದುಕೊಂಡು ಹೋಗುವುದಕ್ಕೂ ಮುನ್ನ ಭಾರಿ ಬಿಗಿ ಭದ್ರತೆಯೊಂದಿಗೆ ವಿಜಯವಾಡದಲ್ಲಿನ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಗೆ ಹಾಜರುಪಡಿಸಲಾಯಿತು. ತಮ್ಮ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನಾಯಕ ಚಂದ್ರಬಾಬು ನಾಯ್ಡು, ರಾಜಕೀಯ ಲಾಭಕ್ಕಾಗಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ನನ್ನ ವಿರುದ್ಧ ಯಾವುದೇ ನೈಜ ಆರೋಪಗಳು ಪತ್ತೆಯಾಗಿಲ್ಲವೆಂದು ಕಾನೂನು ತಾಂತ್ರಿಕತೆಯತ್ತ ಬೊಟ್ಟು ಮಾಡಿದ್ದಾರೆ.
ತಮ್ಮ ಕಕ್ಷಿದಾರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆಯೆನ್ನಲಾದ ಅಪರಾಧದ ಕುರಿತು ತನಿಖೆ ನಡೆಸಲು ಅನುಮತಿ ನೀಡುವ ಅಧಿಕಾರ ಆಂಧ್ರಪ್ರದೇಶದ ರಾಜ್ಯಪಾಲರಿಗೆ ಮಾತ್ರ ಇದೆ ಎಂದು ಅವರ ಪರ ವಕೀಲರು ನ್ಯಾಯಾಲಯದೆದುರು ವಾದಿಸಿದ್ದಾರೆ.
“ಈ ಕ್ರಮವನ್ನು ಅನುಸರಿಸದೆ ಇರುವುದರಿಂದ ಇದು ಶಾಸನಾತ್ಮಕ ಉಲ್ಲಂಘನೆಯಾಗಿದ್ದು, ಹೀಗಾಗಿ ಪೊಲೀಸ್ ವಶವನ್ನು ನಿರಾಕರಿಸಬೇಕು” ಎಂದು ವಾದಿಸಿದ ಚಂದ್ರಬಾಬು ನಾಯ್ಡು, ಹಗರಣದಲ್ಲಿ ಪೊಲೀಸರೇ ಮುಖ್ಯ ಪಿತೂರಿಗಾರರು ಎಂದು ಕೋರ್ಟ್ ಗೆ ತಿಳಿಸಿದ್ದಾರೆ.
ಅದಕ್ಕೆ ಪ್ರತಿಯಾಗಿ, ಆಂಧ್ರಪ್ರದೇಶ ಅಪರಾಧ ತನಿಖಾ ವಿಭಾಗದ ಪೊಲೀಸರು, 73 ವರ್ಷದ ಚಂದ್ರಬಾಬು ನಾಯ್ಡು ವಿಚಾರಣೆಯ ಸಂದರ್ಭದಲ್ಲಿ ಅಸಹಕಾರ ತೋರಿದ್ದಾರೆ ಹಾಗೂ ನನಗೆ ಕೆಲವು ವಿಷಯಗಳು ನೆನಪಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.