3ನೇ 2 ಭಾಗ ಅಂತರವನ್ನು ಕ್ರಮಿಸಿದ ಚಂದ್ರಯಾನ-3
Photo: ಚಂದ್ರಯಾನ-3 | PTI
ಬೆಂಗಳೂರು: ಭಾರತದ ಚಂದ್ರಯಾನ-3 ನೌಕೆಯು ಶುಕ್ರವಾರದ ವೇಳೆಗೆ, ಭೂಮಿ ಮತ್ತು ಚಂದ್ರನ ನಡುವಿನ ಅಂತರದ ಮೂರನೇ ಎರಡು ಭಾಗವನ್ನು ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಆಗಸ್ಟ್ ಒಂದರಂದು, ಇಸ್ರೋ ಚಂದ್ರಯಾನ-3ನ್ನು ಚಂದ್ರನತ್ತ ತೂರಿಬಿಡಲು ಟ್ರಾನ್ಸ್ಲೂನರ್ ಇಂಜೆಕ್ಷನ್ ಕಾರ್ಯಾಚರಣೆಯನ್ನು ಮಾಡಿತ್ತು. ಅಂದರೆ, ಆವರೆಗೆ ಭೂಮಿಯನ್ನು ಸುತ್ತುತ್ತಿದ್ದ ಚಂದ್ರಯಾನವನ್ನು ಚಂದ್ರನತ್ತ ಸಾಗುವ ದಾರಿಯಲ್ಲಿ ಇರಿಸಲಾಗಿತ್ತು.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಆರೋಗ್ಯ ಸಾಮಾನ್ಯವಾಗಿದೆ ಎಂದು ಟ್ರಾನ್ಸ್ಲೂನರ್ ಇಂಜೆಕ್ಷನ್ ಕಾರ್ಯಾಚರಣೆ ಬಳಿಕ ಇಸ್ರೋ ಹೇಳಿತ್ತು. ಅದೀಗ ಚಂದ್ರನ ಪ್ರಭಾ ವಲಯವನ್ನು ಪ್ರವೇಶಿಸಿದೆ ಎಂದಿತ್ತು.
ಶನಿವಾರ ಸಂಜೆ 7 ಗಂಟೆಯ ಸುಮಾರಿಗೆ ಚಂದ್ರಯಾನ-3ನ್ನು ಚಂದ್ರನ ಕಕ್ಷೆಗೆ ಸೇರಿಸುವುದಕ್ಕಾಗಿ ಲೂನಾರ್ ಆರ್ಬಿಟ್ ಇಂಜೆಕ್ಷನ್ ಕಾರ್ಯಾಚರಣೆ ನಡೆಯಲಿದೆ. ಆ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಯೊಂದರಲ್ಲಿ ಕೂರಿಸಲಾಗುವುದು. ಈ ಕಾರ್ಯಾಚರಣೆಯನ್ನು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್ವರ್ಕ್ (ಐಎಸ್ಟಿಆರ್ಎಸಿ)ನಿಂದ ನಡೆಸಲಾಗುವುದು.