ಚಂದಿರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾದ ‘ಚಂದ್ರಯಾನ-3’
ಚಂದ್ರಯಾನ-3 | PHOTO : PTI
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸೋಮವಾರ ಇನ್ನೊಂದು ಮಹತ್ವದ ಸಾಧನೆ ಮಾಡಿದ್ದು, ಚಂದ್ರನ ಮೇಲ್ಮೈಯ ಇನ್ನಷ್ಟು ಸಮೀಪಕ್ಕೆ ಬಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ.
ಚಂದ್ರಯಾನ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ ವೃತ್ತಾಕಾರದ ಕಕ್ಷೆಯನ್ನು ಸಾಧಿಸಿದೆ ಎಂದು ಇಸ್ರೋ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ತದನಂತರು ಅದು ಆಗಸ್ಟ್ 6 ಹಾಗೂ 9ರಂದು ತನ್ನ ಕಕ್ಷೆಯ ಎತ್ತರವನ್ನು ಕಡಿಮೆಗೊಳಿಸುವ ಕಾರ್ಯಾಚರಣೆಯನ್ನು ಎರಡು ಬಾರಿ ನಡೆಸಿತು.
ಕಕ್ಷೆಯ ಪರಿಚಲನೆ (ಆರ್ಬಿಟ್ ಸರ್ಕ್ಯುಲರೈಲೇಶನ್) ಹಂತವು ಆರಂಭಗೊಂಡಿದೆ. ನಿಖರವಾದ ಕಾರ್ಯಾಚರಣೆಯೊಂದಿಗೆ ಸೋಮವಾರ 150 ಕಿ.ಮೀX177 ಕಿ.ಮೀ. ವೃತ್ತಾಕಾರದ ಕಕ್ಷೆಯನ್ನು ಸಾಧಿಸಲಾಗಿದೆಯೆಂದು ಇಸ್ರೋ ಟ್ವೀಟ್ ಮಾಡಿದೆ.
ಚಂದ್ರಯಾನದ ಮುಂದಿನ ಕಾರ್ಯಾಚರಣೆಯು ಆಗಸ್ಟ್ 16ರಂದು ಬೆಳಗ್ಗೆ 8:30ರ ವೇಳೆಗೆ ನಡೆಯಲಿದೆ.