ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದ ಮೊಟ್ಟಮೊದಲ ಆಳಮಣ್ಣಿನ ತಾಪಮಾನ ಅವಲೋಕನ ಹಂಚಿಕೊಂಡ ಇಸ್ರೋ
Photo: twitter \ @isro
ಬೆಂಗಳೂರು: ಚಂದ್ರನ ಮೇಲೆ ಇಳಿದಿರುವ ವಿಕ್ರಮ ಲ್ಯಾಂಡರ್ ನಲ್ಲಿಯ ಚೇಸ್ಟ್ (ಚಂದ್ರಾಸ್ ಸರ್ಫೇಸ್ ಥರ್ಮೊಫಿಜಿಕಲ್ ಎಕ್ಸ್ಪೆರಿಮೆಂಟ್) ಪೇಲೋಡ್ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದ ತಾಪಮಾನದ ಅವಲೋಕನಗಳನ್ನು ಮಾಡಿದ್ದು, ಇಸ್ರೋ ರವಿವಾರ ಇವುಗಳನ್ನು ಬಿಡುಗಡೆಗೊಳಿಸಿದೆ.
ಚೇಸ್ಟ್ ಚಂದ್ರನ ದಕ್ಷಿಣ ಧ್ರುವದ ಸುತ್ತಲಿನ ಮೇಲ್ಮೈ ಮಣ್ಣಿನ ತಾಪಮಾನ ವಿವರಗಳನ್ನು ಅಳೆದಿದೆ. ಈ ವೈಜ್ಞಾನಿಕ ಅವಲೋಕನಗಳು ಚಂದ್ರನ ಮೇಲ್ಮೈಯ ಉಷ್ಣ ವರ್ತನೆಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳಿಗೆ ನೆರವಾಗುವ ನಿರೀಕ್ಷೆಯಿದೆ.
ಚೇಸ್ಟ್ ನಲ್ಲಿ ಅಳವಡಿಸಲಾಗಿರುವ ಟೆಂಪರೇಚರ್ ಪ್ರೋಬ್ ಚಂದ್ರನ ಮೇಲ್ಮೈ ಅಡಿಯ ಮಣ್ಣಿನ್ನು ಭೇದಿಸಿ 10 ಸೆಂ.ಮೀ.ಆಳದವರೆಗೆ ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ. ಅದು ನಿಯಂತ್ರಿತ ನುಗ್ಗುವಿಕೆ ಕಾರ್ಯವಿಧಾನವನ್ನು ಪ್ರದರ್ಶಿಸುವ ಜೊತೆಗೆ 10 ಪ್ರತ್ಯೇಕ ತಾಪಮಾನ ಸೆನ್ಸರ್ಗಳನ್ನೂ ಹೊಂದಿದೆ.
ಆಳಕ್ಕೆ ಸಾಗಿದಂತೆ ಚಂದ್ರನ ಮೇಲ್ಮೈ ಮಣ್ಣಿನಲ್ಲಿಯ ತಾಪಮಾನ ವ್ಯತ್ಯಾಸಗಳನ್ನು ತೋರಿಸುವ ಗ್ರಾಫ್ನ್ ನ ಇಸ್ರೋ ಬಿಡುಗಡೆಗೊಳಿಸಿದೆ. ಚಂದ್ರನ ಮೇಲ್ಮೈನಲ್ಲಿಯ ಮತ್ತು ಮೇಲ್ಮೈ ಸಮೀಪದ ವಿವಿಧ ಆಳಗಳಲ್ಲಿಯ ತಾಪಮಾನ ವ್ಯತ್ಯಾಸಗಳನ್ನು ಪ್ರೋಬ್ ದಾಖಲಿಸಿದೆ.
ಇಸ್ರೋದ ಪ್ರಕಾರ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೊದಲ ಟೆಂಪರೇಚರ್-ಡೆಪ್ತ್ ಪ್ರೊಫೈಲ್ ನನ್ನು ಉತ್ಪಾದಿಸಿದೆ.
ಧ್ರುವ ಪ್ರದೇಶದ ಸಮೀಪದ ಚಂದ್ರನ ಮೇಲ್ಮೈನ ತಾಪಮಾನ ಮತ್ತು ಉಷ್ಣ ವಾಹಕತೆ ಸೇರಿದಂತೆ ಉಷ್ಣ ಗುಣಲಕ್ಷಣಗಳನ್ನು ಅಳೆಯುವಲ್ಲಿ ಚೇಸ್ಟ್ ಪಾತ್ರವನ್ನು ಹೊಂದಿದೆ. ಚಂದ್ರನ ಮೇಲ್ಮೈ ತಾಪಮಾನ ವ್ಯತ್ಯಾಸಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರ ಕುರಿತು ವೌಲಿಕ ಡೇಟಾವನ್ನು ಚೇಸ್ಟ್ ಒದಗಿಸಲಿದೆ ಎಂದು ಹೇಳಿದ ಇಸ್ರೋ ವಿಜ್ಞಾನಿ ಕೆ.ಸಿದ್ಧಾರ್ಥ ಅವರು, ಲಕ್ಷಾಂತರ ವರ್ಷಗಳಿಂದ ಚಂದ್ರನ ಭೂಪ್ರದೇಶವನ್ನು ರೂಪಿಸಿದ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ಚೇಸ್ಟ್ ನೆರವಾಗಲಿದೆ ಎಂದು ವಿವರಿಸಿದರು.