Chandrayaan-3: 14 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಏನಾಗುತ್ತದೆ?
Chandrayaan-3 | Photo: twitter \ @isro
ಬೆಂಗಳೂರು: ಭಾರತದ ಚಂದ್ರಯಾನ- 3 ಯೋಜನೆಯ ಭಾಗವಾಗಿರುವ ‘‘ಪ್ರಜ್ಞಾನ’’ ರೋವರನ್ನು ಗುರುವಾರ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಬುಧವಾರ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ನಿಧಾನ ನೆಲಸ್ಪರ್ಶ (ಸಾಫ್ಟ್ ಲ್ಯಾಂಡಿಂಗ್) ಮಾಡಿದ ‘ವಿಕ್ರಮ’ ಲ್ಯಾಂಡರ್ನೊಳಗಿದ್ದ ಪ್ರಜ್ಞಾನ ಈಗ ಹೊರಬಂದಿದ್ದು ಚಂದ್ರನ ಮೇಲೆ ಓಡಾಟ ಆರಂಭಿಸಿದೆ.
ಪ್ರಜ್ಞಾನ್ ರೋವರನ್ನು ಹೊತ್ತ ವಿಕ್ರಮ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸರಾಗ ನೆಲಸ್ಪರ್ಶ ಮಾಡಿದ ಬಳಿಕ, ಜಗತ್ತಿನ ವಿಜ್ಞಾನಿಗಳ ಕುತೂಹಲ ತಣಿಸುವಷ್ಟು ಮಾಹಿತಿಗಳನ್ನು ಕಲೆಹಾಕಲು 14 ದಿನಗಳ ಕಾಲಾವಕಾಶವನ್ನು ಹೊಂದಿವೆ. ಅಂದರೆ ಭೂಮಿಯ ಈ 14 ದಿನಗಳು ಚಂದ್ರನ ಒಂದು ಹಗಲಿಗೆ ಸಮವಾಗಿವೆ.
14 ದಿನಗಳ ಬಳಿಕ ಚಂದ್ರನನ್ನು ರಾತ್ರಿ ಆವರಿಸಿಕೊಳ್ಳುತ್ತದೆ. ಈ ರಾತ್ರಿಯೂ ಭೂಮಿಯ 14 ದಿನಗಳಷ್ಟು ದೀರ್ಘವಾಗಿವೆ. ಚಂದ್ರನ ರಾತ್ರಿಯ ಅವಧಿಯಲ್ಲಿ ಪ್ರಜ್ಞಾನ ರೋವರ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಾರದು. ಯಾಕೆಂದರೆ, ರೋವರ್ ನಡೆಯುವುದು ಸೂರ್ಯನ ಬೆಳಕಿನ ಶಕ್ತಿಯಿಂದ. ಈ ಅವಧಿಯಲ್ಲಿ ಕತ್ತಲೆಯಾಗಿರುವುದರಿಂದ ಸೌರಶಕ್ತಿ ಸಿಗುವುದಿಲ್ಲ.
ಅದೂ ಅಲ್ಲದೆ, ರಾತ್ರಿಯ ಉಷ್ಣತೆಯು ಮೈನಸ್ 133 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಬಹುದು. ಇದು ಯಾವುದೇ ಯಂತ್ರಗಳಿಗೆ ಮಾರಕವಾಗಿದೆ. ಹಾಗಾಗಿ, ರೋವರ್, ಲ್ಯಾಂಡರ್ ಮತ್ತು ಅವುಗಳಲ್ಲಿರುವ ಉಪಕರಣಗಳು ಸುಲಲಿತವಾಗಿ ಕೆಲಸ ಮಾಡವು.
ಈ ಅವಧಿಯಲ್ಲಿ, ರೋವರ್ ಲ್ಯಾಂಡರ್ನೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ರೋವರ್ ಸಂಗ್ರಹಿಸಿದ ಮಾಹಿತಿಗಳು ಮತ್ತು ದತ್ತಾಂಶಗಳನ್ನು ಲ್ಯಾಂಡರ್ ಇಸ್ರೋದ ಯೋಜನಾ ನಿಯಂತ್ರಣ ಕೇಂದ್ರಕ್ಕೆ ಕಳುಹಿಸುವುದು.
ಹಗಲು ಆರಂಭವಾಗುವ ದಿನವೇ ನೆಲಸ್ಪರ್ಶ
ಆಗಸ್ಟ್ 23ರಂದು ಚಂದ್ರನ ಹಗಲು ಆರಂಭವಾಗುತ್ತದೆ. ಹಾಗಾಗಿ, ಅದೇ ದಿನ 1,752 ಕೆಜಿ ತೂಕದ ವಿಕ್ರಮ ಲ್ಯಾಂಡರನ್ನು ಚಂದ್ರನ ಮೇಲೆ ಇಳಿಸಲು ಇಸ್ರೋ ನಿರ್ಧರಿಸಿತ್ತು.
ಒಂದು ವೇಳೆ, ಆ ದಿನ ನೆಲಸ್ಪರ್ಶ ಸಾಧ್ಯವಾಗಿರದಿದ್ದರೆ ಆಗಸ್ಟ್ 24ರಂದು ಮಾಡಲು ಅದು ಮುಂದಾಗಿತ್ತು. ಒಂದು ವೇಳೆ ಆ ದಿನವೂ ಸಾಧ್ಯವಾಗದಿದ್ದರೆ ಹಾಗೂ ಲ್ಯಾಂಡರ್ ಸುಸ್ಥಿತಿಯಲ್ಲಿದ್ದರೆ, 29 ದಿನಗಳ ಬಳಿಕ, ಅಂದರೆ ಚಂದ್ರನ ಇನ್ನೊಂದು ಹಗಲಿನ ಆರಂಭದ ದಿನ ಲ್ಯಾಂಡರನ್ನು ಇಳಿಸಲು ಇಸ್ರೋ ಯೋಜನೆ ರೂಪಿಸಿತ್ತು ಎನ್ನಲಾಗಿದೆ.
ಚಂದ್ರನ ಹಿಮ ನೀರಿನ ಮೇಲೆ ಹೊಸ ಬೆಳಕು
ಚಂದ್ರಯಾನ-3ರ ಸಾಧನೆ ವಿಶಿಷ್ಟವಾಗಿದೆ. ಯಾಕೆಂದರೆ, ಈವರೆಗೆ ಬೇರೆ ಯಾವುದೇ ವ್ಯೋಮನೌಕೆಗೆ ಚಂದ್ರನ ದಕ್ಷಿಣ ಧ್ರುವದ ಸಮೀಪ ಹಗುರ ನೆಲಸ್ಪರ್ಶ ನಡೆಸಲು ಸಾಧ್ಯವಾಗಿಲ್ಲ. ಮಾನವಸಹಿತ ಅಪೋಲೊ ವ್ಯೋಮನೌಕೆಗಳು ಸೇರಿದಂತೆ ಈವರೆಗಿನ ಚಂದ್ರ ಯೋಜನೆಗಳು ಚಂದ್ರನ ಮಧ್ಯರೇಖೆಯ ಪ್ರದೇಶವನ್ನೇ ಗುರಿಯಾಗಿಸಿದ್ದವು. ಚಂದ್ರನ ದಕ್ಷಿಣ ಧ್ರುವವು ಮಧ್ಯರೇಖೆಗಿಂತ ತುಂಬಾ ದೂರದಲ್ಲಿದೆ. ಈ ಪ್ರದೇಶವು ಕುಳಿಗಳು ಮತ್ತು ಆಳವಾದ ಕಣಿವೆಗಳಿಂದ ತುಂಬಿದೆ.
ಚಂದ್ರಯಾನ-3ರ ಸಂಶೋಧನೆಗಳು ಚಂದ್ರನ ಅತ್ಯಂತ ಮೌಲಿಕ ಸಂಪನ್ಮೂಲಗಳ ಪೈಕಿ ಒಂದಾಗಿದೆ ಎಂಬುದಾಗಿ ಭಾವಿಸಲಾಗಿರುವ ಹಿಮ ರೂಪದಲ್ಲಿರುವ ನೀರಿನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಬಹುದಾಗಿದೆ.