ಎರಡು ವಾರಗಳ ವಿರಾಮದ ಬಳಿಕ ಚಂದ್ರಯಾನ ಪುನಶ್ಚೇತನ: ಇಸ್ರೊ ಪ್ರಯತ್ನ
ಬೆಂಗಳೂರು: ಚಂದ್ರನಲ್ಲಿ ನಸುಕು ಹರಿಯಲು ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗಳನ್ನು ಎರಡು ವಾರಗಳ 'ನಿದ್ದೆ'ಯಿಂದ ಎಬ್ಬಿಸಿ ಪುನಶ್ಚೇತನ ನೀಡುವ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ.
ರಾತ್ರಿಯ ಅವಧಿಯಲ್ಲಿ ಚಂದ್ರನ ಅತ್ಯಂತ ಶೀತ ಉಷ್ಣಾಂಶದಲ್ಲಿ ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಸುಸ್ಥಿತಿಯನ್ನು ಉಳಿಸಿಕೊಂಡಲ್ಲಿ, ಬೆಳಕು ಹರಿದ ಬಳಿಕ ತನ್ನ ಕಾರ್ಯವನ್ನು ಮತ್ತೆ ಆರಂಭಿಸಲಿದೆ. ಚಂದ್ರಯಾನ ಮಿಷನ್ ಈಗಾಗಲೇ ಯಶಸ್ವಿಯಾಗಿದ್ದು, ಈ ಮಾಡ್ಯೂಲ್ ಗಳನ್ನು ರೀಬೂಟ್ ಮಾಡುವ ಕೆಲಸ ಗುರುವಾರ ಹಾಗೂ ಶುಕ್ರವಾರ ನಡೆಯಲಿದೆ. ಇದು ಯಶಸ್ವಿಯಾದಲ್ಲಿ ಮಿಷನ್ ನಿಂದ ಹೆಚ್ಚುವರಿ ಲಾಭ ಪಡೆಯುವುದು ಸಾಧ್ಯವಾಗಲಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.
ಲ್ಯಾಂಡರ್ ಹಾಗೂ ರೋವರ್ ನಿಲುಗಡೆ ಮಾಡಿರುವ ಪಾಯಿಂಟ್ ನಲ್ಲಿ ಸೂರ್ಯ ಉದಯವಾಗುತ್ತಿದ್ದಂತೆ, ಈ ಸಾಧನಗಳು ಮತ್ತೆ ಕಾರ್ಯಾರಂಭ ಮಾಡುವ ನಿರೀಕ್ಷೆ ನಮ್ಮದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ಸೆಪ್ಟೆಂಬರ್ 21 ಹಾಗೂ 22ರಂದು ಅಂದರೆ ಚಂದ್ರನ ನಸುಕಿನಲ್ಲಿ ಈ ಸಾಧನಗಳಿಗೆ ಪುನಶ್ಚೇತನ ನೀಡಲು ಉದ್ದೇಶಿಸಿದ್ದೇವೆ. 22ರಂದು ಈ ಸಾಧನಗಳು ಮತ್ತೆ ಜೀವ ಪಡೆಯುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಕ್ರಂ ಹಾಗೂ ಪ್ರಜ್ಞಾನ್ ಗಳನ್ನು ನಿಷ್ಕ್ರಿಯ ಸ್ಥಿತಿಗೆ ಕೊಂಡೊಯ್ಯುವ ಮೊದಲು ಅವುಗಳ ಬ್ಯಾಟರಿಗಳನ್ನು ಸೂರ್ಯರಶ್ಮಿಯಿಂದ ಚಾರ್ಜ್ ಮಾಡಲಾಗಿತ್ತು. ಮತ್ತೆ ಮುಂಜಾನೆಯ ಅವಧಿಯಲ್ಲಿ ಬ್ಯಾಟರಿ ಪ್ಯಾನಲ್ ಗಳನ್ನು ಬೆಳಕು ಸ್ವೀಕರಿಸಲು ಅನುವಾಗುವಂತೆ ಸಜ್ಜುಗೊಳಿಸಲಾಗಿದೆ ಎಂದು ಇಸ್ರೊ ವಿಜ್ಞಾನಿಗಳು ವಿವರ ನೀಡಿದ್ದಾರೆ.