ವಕ್ಫ್ ಕಾಯ್ದೆ ಬದಲಾವಣೆ ಸಹಿಸುವುದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಹೊಸದಿಲ್ಲಿ: ವಕ್ಫ್ ಆಸ್ತಿಗಳ ಸ್ವರೂಪವನ್ನು ತಿರುಚುವ ಉದ್ದೇಶದಿಂದ 2013ರ ವಕ್ಫ್ ಕಾಯ್ದೆಗೆ ಯಾವುದೇ ಬದಲಾವಣೆ ತರುವುದನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ವೀಕರಿಸುವುದಿಲ್ಲ ಮತ್ತು ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಭಾನುವಾರ ಎಚ್ಚರಿಕೆ ನೀಡಿದೆ.
ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ಕಾಯ್ದೆಗೆ 40 ತಿದ್ದುಪಡಿಗಳನ್ನು ತರುವ ಸಂಬಂಧ ಚರ್ಚೆ ನಡೆಸಲಾಗಿದೆ ಹಾಗೂ ಈ ತಿದ್ದುಪಡಿಗಳು ವಕ್ಫ್ ಮಂಡಳಿಯ ಅಧಿಕಾರವನ್ನು ನಿರ್ಬಂಧಿಸಲಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ. ಈ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎನ್ನುವುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ವಕ್ಫ್ ಆಸಿಗಳನ್ನು ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕೆ ನೀಡಿದ್ದಾರೆ. ಭಾರತದಲ್ಲಿ ವಕ್ಫ್ ಆಸ್ತಿಗಳು ವಕ್ಫ್ ಕಾಯ್ದೆಗೆ ಅನುಸಾರವಾಗಿರುತ್ತವೆ. ಕಾನೂನು ಸಂಸ್ಥೆಯ ನೇತೃತ್ವದಲ್ಲಿ ಪ್ರತಿ ರಾಜ್ಯದಲ್ಲೂ ವಕ್ಫ್ ಮಂಡಳಿ ಇದೆ. ಇವರಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ, ಉಳಿಸಿಕೊಳ್ಳುವ ಮತ್ತು ವರ್ಗಾಯಿಸುವ ಅಧಿಕಾರ ಇದೆ.
ವಕ್ಫ್ ಮಂಡಳಿಯ ವಕ್ತಾರ ಸೈಯದ್ ಕಾಸಿಂ ರಸೂಲಿ ಇಲಿಯಾಸ್ ಅವರು ಈ ಬಗ್ಗೆ ಹೇಳಿಕೆ ನೀಡಿ, ವಕ್ಫ್ ಕಾಯ್ದೆ ಮತ್ತು ವಕ್ಫ್ ಆಸ್ತಿಗಳನ್ನು ಸಂವಿಧಾನ ಮತ್ತು ಶರಿಯತ್ ಅನ್ವಯಿಸುವ ಕಾಯ್ದೆ-1937 ಸಂರಕ್ಷಿಸುತ್ತದೆ. ಆದ್ದರಿಂದ ಈ ಆಸ್ತಿಗಳ ಸ್ವರೂಪ ಅಥವಾ ಸ್ಥಿತಿಗತಿಯನ್ನು ಪರಿವರ್ತಿಸುವ ಅಥವಾ ಬದಲಾಯಿಸುವ ಯಾವುದೇ ತಿದ್ದುಪಡಿಗಳನ್ನು ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತ್ರಿವಳಿ ತಲಾಖ್ ವಿರುದ್ಧದ ಕಾನೂನು, ಮೌಲಾನಾ ಆಜಾದ್ ಫೌಂಡೇಷನ್ ಮುಚ್ಚುವುದು, ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನವನ್ನು ನಿರ್ಬಂಧಿಸಿರುವುದು ಹೀಗೆ ಮೋದಿ ಸರ್ಕಾರ ಮುಸ್ಲಿಮರಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರಗಳು ಮುಸ್ಲಿಮರಿಂದ ಕಿತ್ತುಕೊಂಡಿವೆಯೇ ವಿನಃ ಏನನ್ನೂ ನೀಡಿಲ್ಲ ಎಂದು ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.