ಏಶ್ಯಾನೆಟ್ ನ್ಯೂಸ್’ನಲ್ಲಿ ಕುಂಭಮೇಳವನ್ನು ಟೀಕಿಸುವ ಕಾರ್ಯಕ್ರಮ ಪ್ರಸಾರ; ಮಾಲೀಕ ರಾಜೀವ್ ಚಂದ್ರಶೇಖರ್ ‘ಅಸಮಾಧಾನ’

Photo : X/Rajeev Chandrasekhar
ತಿರುವನಂತಪುರ: ತನ್ನ ಒಡೆತನದ ಮಲಯಾಳಮ್ ಟಿವಿ ಚಾನೆಲ್ ‘ಏಶ್ಯಾನೆಟ್ ನ್ಯೂಸ್’ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಮಹಾ ಕುಂಭಮೇಳದ ಬಗ್ಗೆ ಮಾಡಲಾದ ಟಿಪ್ಪಣಿಗಳ ಬಗ್ಗೆ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಪ್ರತಿಯೊಬ್ಬ ಹಿಂದೂವಿಗೆ ನಂಬಿಕೆ ಮುಖ್ಯ’’ ಎಂಬುದಾಗಿ ಮಂಗಳವಾರ ಫೇಸ್ಬುಕ್ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಚಂದ್ರಶೇಖರ್ ಹೇಳಿದ್ದಾರೆ.
ಮಾರ್ಚ್ ಒಂದರಂದು ಪ್ರಸಾರವಾದ ವಾರದ ಕಾರ್ಯಕ್ರಮ ‘ಕವರ್ ಸ್ಟೋರಿ’ಯಲ್ಲಿ, ಏಶ್ಯಾನೆಟ್ ನ್ಯೂಸ್ ವಾಹಿನಿಯು, ಕುಂಭ ಮೇಳಕ್ಕೆ ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಕೇರಳೀಯರನ್ನು ಪರೋಕ್ಷವಾಗಿ ಟೀಕಿಸಿತ್ತು ಎನ್ನಲಾಗಿದೆ.
‘‘ಕೇರಳದ ನೂರಾರು ಜನರು ಗಂಗಾ ಸ್ನಾನದಲ್ಲಿ ಪಾಲ್ಗೊಂಡರು. ಈವರೆಗೆ ಮಹತ್ವ ಪಡೆಯದ ಹಿಂದೂ ಭಾವನೆಗಳು, ಸಂಪ್ರದಾಯಗಳು ಮತ್ತು ಕುಂಭಮೇಳ ಸ್ನಾನವು ಈಗ ಸಿಪಿಎಮ್ ಆಳ್ವಿಕೆಯ ರಾಜ್ಯದಲ್ಲಿ ಮುನ್ನೆಲೆಗೆ ಬಂದಿವೆ. ಕೇರಳವು 100 ಶೇಕಡ ಸಾಕ್ಷರರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಯ ಹೊರತಾಗಿಯೂ, ಕುಂಭಮೇಳ ಸ್ನಾನ ಮತ್ತು ಬಿಜೆಪಿಯನ್ನು ತೃಪ್ತಿಪಡಿಸುವುದು ತುಂಬಾ ಸಂಖ್ಯೆಯ ಕೇರಳಿಗರ ಪ್ರಿಯವಾದ ಸಂಗತಿಗಳಾಗಿವೆ’’ ಎಂದು ಟಿವಿ ವಾಹಿನಿಯ ಕಾರ್ಯಕ್ರಮ ಹೇಳಿತ್ತು.
ಈ ಕಾರ್ಯಕ್ರಮದಿಂದ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿ ಹಲವಾರು ಮಲಯಾಳಿಗಳು ನನಗೆ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಫೇಸ್ಬುಕ್ ಸಂದೇಶದಲ್ಲಿ ಚಂದ್ರಶೇಖರ್ ಹೇಳಿದ್ದಾರೆ.
‘‘ಆ ಕಾರ್ಯಕ್ರಮವು ಕುಂಭಮೇಳವನ್ನು ಅಣಕಿಸುವಂತಿತ್ತು. ಮಹಾ ಕುಂಭಮೇಳದಲ್ಲಿ ಪಾಲ್ಗೊಂಡ ಕೋಟ್ಯಂತರ ಭಕ್ತರಲ್ಲಿ ನನ್ನ ಕುಟುಂಬವು ಸೇರಿದೆ. ಏಶ್ಯಾನೆಟ್ ನ್ಯೂಸ್ನ ಮುಖ್ಯಸ್ಥರ ಗಮನಕ್ಕೆ ನಾನು ಈ ವಿಷಯವನ್ನು ತಂದಿದ್ದೇನೆ. ಲಕ್ಷಾಂತರ ಭಕ್ತರು ಭಾಗವಹಿಸಿರುವ ಕಾರ್ಯಕ್ರಮವೊಂದರ ಬಗ್ಗೆ ಇಂಥ ಹೊಣೆಗೇಡಿ ಹಾಗೂ ಅಪಹಾಸ್ಯದ ಮಾತುಗಳನ್ನು ಆಡಬಾರದು ಎಂಬುದಾಗಿ ನಾನು ಅವರಿಗೆ ಹೇಳಿದ್ದೇನೆ’’ ಎಂದು ಅವರು ಬರೆದಿದ್ದಾರೆ.