ಮೋದಿ ಸರಕಾರದಿಂದ ರೈತರ ಚಾರಿತ್ರ್ಯಹತ್ಯೆ ನಿರಂತರವಾಗಿ ನಡೆಯುತ್ತಿದೆ : ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ , ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಮೋದಿ ಸರಕಾರವು ನಿರಂತರವಾಗಿ ರೈತರನ್ನು ಅವಮಾನಿಸುವಲ್ಲಿ ತೊಡಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ, “378 ದಿನಗಳ ಕಾಲ ಮ್ಯಾರಥಾನ್ ನಂತೆ ನಡೆದ ಹೋರಾಟದಲ್ಲಿ 700 ಸಹಚರರನ್ನು ಬಲಿಕೊಟ್ಟ ರೈತರನ್ನು, ಬಿಜೆಪಿ ಸಂಸದೆ ಅತ್ಯಾಚಾರಿಗಳು ಎನ್ನುತ್ತಿದ್ದಾರೆ. ಅವರನ್ನು ವಿದೇಶಿ ಶಕ್ತಿಗಳ ಪ್ರತಿನಿಧಿಗಳು ಎಂದು ಕರೆದಿದ್ದಾರೆ. ಇದು ಬಿಜೆಪಿಯ ರೈತ ವಿರೋಧಿ ನೀತಿ ಮತ್ತೊಂದು ಸಾಕ್ಷಿಯಾಗಿದೆ” ಎಂದು ತಿಳಿಸಿದ್ದಾರೆ.
“ರೈತ ವಿರೋಧಿ ಹೇಳಿಕೆಯು ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಇಡೀ ದೇಶದ ರೈತರಿಗೆ ಘೋರ ಅವಮಾನ. ಈ ನಾಚಿಕೆಗೇಡಿನ ವಿಚಾರವನ್ನು ಯಾವುದೇ ಪರಿಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಖಂಡಿಸಿದ್ದಾರೆ.
किसानों से किए वादों को पूरा करने में नाकाम मोदी सरकार का दुष्प्रचार तंत्र लगातार किसानों का अपमान करने में जुटा हुआ है।
— Rahul Gandhi (@RahulGandhi) August 26, 2024
378 दिन चले मैराथन संघर्ष के दौरान 700 साथियों का बलिदान देने वाले किसानों को भाजपा सांसद द्वारा बलात्कारी और विदेशी ताकतों का नुमाइंदा कहना भाजपा की किसान…
“ರೈತ ಚಳವಳಿ ಹಿಂಪಡೆಯುವ ಸಂದರ್ಭದಲ್ಲಿ ರಚಿಸಲಾಗಿದ್ದ ಸರಕಾರ ಸಮಿತಿಯು ಶೈತ್ಯಾಗಾರದಲ್ಲಿಯೇ ಇದೆ. ಕನಿಷ್ಠ ಬೆಂಬಲ ಬೆಲೆ(MSP)ಯ ಕುರಿತು ಸರಕಾರಕ್ಕೆ ತನ್ನ ನಿಲುವು ಸ್ಪಷ್ಟಪಡಿಸಲು ಇಂದಿಗೂ ಸಾಧ್ಯವಾಗಿಲ್ಲ. ಹುತಾತ್ಮ ರೈತರ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಆದರೆ ರೈತರ ಚಾರಿತ್ರ್ಯಹತ್ಯೆ ನಿರಂತರವಾಗಿ ನಡೆಯುತ್ತಿದೆ” ಎಂದು ವಿಷಾದಿಸಿದ್ದಾರೆ.
“ಅನ್ನದಾತರಿಗೆ ಅಗೌರವ ತೋರಿ ಅವರ ಘನತೆಗೆ ಧಕ್ಕೆ ತರುವ ಮೂಲಕ ಮೋದಿ ಸರಕಾರ ರೈತರಿಗೆ ಮಾಡಿದ ದ್ರೋಹವನ್ನು ಮರೆಯಲಾಗದು. ನರೇಂದ್ರ ಮೋದಿ ಮತ್ತು ಬಿಜೆಪಿ ಎಷ್ಟೇ ಷಡ್ಯಂತ್ರ ಮಾಡಿದರೂ ರೈತರಿಗೆ ಎಂಎಸ್ಪಿಯ ಕಾನೂನಾತ್ಮಕ ಗ್ಯಾರಂಟಿ ಸಿಗುವಂತೆ ಇಂಡಿಯಾ ಮೈತ್ರಿಕೂಟವು ಖಚಿತಪಡಿಸುತ್ತದೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.