ತಾಂತ್ರಿಕ ದೋಷದಿಂದ ವಿಶ್ವಾದ್ಯಂತ ಚಾಟ್ ಜಿಪಿಟಿ ಸ್ಥಗಿತ: ಓಪನ್ ಎಐ ಮಹತ್ವದ ಮಾಹಿತಿ
PC: istockphoto.com
ಜನಪ್ರಿಯ ಎಐ-ಚಾಲಿತ ಚಾಟ್ ಬಾಟ್ ಚಾಟ್ ಜಿಪಿಟಿ ತಾಂತ್ರಿಕ ಕಾರಣಗಳಿಂದ ಆಫ್ ಲೈನ್ ಆದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರು ಸೇವೆ ಲಭ್ಯವಾಗದೇ ಸಂಕಷ್ಟಕ್ಕೆ ಸಿಲುಕುವಂತಾಯಿತು. ಬುಧವಾರ ರಾತ್ರಿ 7 ಗಂಟೆಯ ಸುಮಾರಿಗೆ ಸೇವೆ ಸ್ಥಗಿತಗೊಂಡಿದ್ದು, ಕೇವಲ ಚಾಟ್ ಜಿಪಿಟಿ ಮಾತ್ರವಲ್ಲದೇ ಓಪನ್ಎಐನ ಎಪಿಐ ಹಾಗೂ ಸೊರಾ ಸೇವೆಗಳ ನಿಲುಗಡೆಗೂ ಕಾರಣವಾಯಿತು.
ಚಾಟ್ ಜಿಪಿಟಿ ಸೇವೆ ಒದಗಿಸುತ್ತಿರುವ ಓಪನ್ಎಐ ಕಂಪನಿ ಸಾಮಾಜಿಕ ಜಾಲತಾಣಗಳಲ್ಲಿ ತಾಂತ್ರಿಕ ಸಮಸ್ಯೆಯನ್ನು ದೃಢಪಡಿಸಿದೆ. ಸಮಸ್ಯೆಯನ್ನು ಪತ್ತೆ ಮಾಡಲಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಸ್ಪಷ್ಟಪಡಿಸಿತ್ತು. "ಇದೀಗ ನಮಗೆ ಸಮಸ್ಯೆ ಅರಿವಿಗೆ ಬಂದಿದೆ. ಸಮಸ್ಯೆಯನ್ನು ಪತ್ತೆ ಮಾಡಲಾಗಿದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕ್ಷಮಿಸಿ; ನಿಮಗೆ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತೇವೆ" ಎಂದು ಕಂಪನಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದೆ.
ಈ ಸೇವಾ ಸ್ಥಗಿತದಿಂದಾಗಿ ವಿಶ್ವಾದ್ಯಂತ ತಮ್ಮ ಪ್ರಾಜೆಕ್ಟ್ ಗಳಿಗೆ ಓಪನ್ಎಐ ಎಪಿಐ ಬಳಸುವ ಕಂಪನಿಗಳ ಚಟುವಟಿಕೆಗಳು ಅಸ್ತವ್ಯಸ್ತಗೊಂಡವು. ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹತಾಶೆ ಮತ್ತು ಗೊಂದಲವನ್ನು ಹಂಚಿಕೊಂಡರು. ಲಾಗಿನ್ ಪ್ರಕ್ರಿಯೆ ನಿಧಾನವಾಗುತ್ತಿರುವ ಬಗ್ಗೆ ಹಾಗೂ ಕ್ಷಮತೆ ಕಳಪೆಯಾಗಿರುವ ಬಗ್ಗೆ ಅನುಭವ ಹಂಚಿಕೊಂಡರು.
ಟ್ರ್ಯಾಕ್ ಗಳ ತೊಂದರೆ ಬಗ್ಗೆ ಮಾಹಿತಿ ನಿಡುವ ಡೌನ್ ಡಿಟೆಕ್ಟರ್ ಪ್ರಕಾರ, ಚಾಟ್ ಜಿಪಿಟಿ ಆಫ್ಲೈನ್ ಆಗಿರುವ ಬಗ್ಗೆ ದೂರುಗಳು ದೊಡ್ಡ ಸಂಖ್ಯೆಯಲ್ಲಿ ಬಂದಿವೆ. ಬಳಕೆದಾರರು ಸಲ್ಲಿಸಿದ ವರದಿಗಳ ಆಧಾರದಲ್ಲಿ ಡೌನ್ ಡಿಟೆಕ್ಟರ್ ಸಂಖ್ಯೆಯ ವಿವರ ನೀಡುತ್ತದೆ. ಆದರೆ ವಾಸ್ತವವಾಗಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ.
ಸೇವೆ ಸಹಜ ಸ್ಥಿತಿಗೆ ಬರಲು ಎಷ್ಟು ಸಮಯ ಬೇಕಾಗಬಹುದು ಎಂಬ ಬಗ್ಗೆ ಓಪನ್ಎಐ ಯಾವುದೇ ವಿವರ ನೀಡಿಲ್ಲ. ಆದರೆ ಬೆಳವಣಿಗೆಗಳ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡುವುದಾಗಿ ಭರವಸೆ ನೀಡಿದೆ.